ನವದೆಹಲಿ: ದೆಹಲಿಯ ವಾಯು ಮಾಲಿನ್ಯವು ಮಹಿಳೆಯರಿಗಿಂತ ಪುರುಷರ ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ.
ಹೌದು, ನೇತಾಜಿ ಸುಭಾಷ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (NSUT)ಯ ಸಂಶೋಧಕರು ನಡೆಸಿದ ಐದು ವರ್ಷಗಳ ಅಧ್ಯಯನದಲ್ಲಿ, ಪುರುಷರ ಶ್ವಾಸಕೋಶದಲ್ಲಿ PM2.5 ಮತ್ತು PM10 ಎಂಬ ಸೂಕ್ಷ್ಮ ಕಣಗಳು ಮಹಿಳೆಯರಿಗಿಂತ 1.4 ಪಟ್ಟು ಹೆಚ್ಚು ಸೇರಿಕೊಳ್ಳುತ್ತವೆ ಎಂಬುದು ತಿಳಿದುಬಂದಿದೆ.
2019ರಿಂದ 2023ರವರೆಗಿನ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಡೇಟಾವನ್ನು ಆಧರಿಸಿದ ಈ ಅಧ್ಯಯನದ ಪ್ರಕಾರ, ಪುರುಷರು ಹೆಚ್ಚು ಹೊರಗೆ ಕೆಲಸ ಮಾಡುವುದು, ದೊಡ್ಡ ಶ್ವಾಸಕೋಶದ ಸಾಮರ್ಥ್ಯ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆಗಳೇ ಇದಕ್ಕೆ ಮುಖ್ಯ ಕಾರಣಗಳು. ಕುಳಿತಿರುವಾಗ PM2.5 ಕಣಗಳ ಸೇರ್ಪಡೆ ಪುರುಷರಲ್ಲಿ 1.4 ಪಟ್ಟು ಹೆಚ್ಚಿದ್ದರೆ, ನಡೆಯುವಾಗ 1.2 ಪಟ್ಟು ಹೆಚ್ಚು. PM10ಗೂ ಇದೇ ರೀತಿ 1.34 ಮತ್ತು 1.15 ಪಟ್ಟು ವ್ಯತ್ಯಾಸ ಕಂಡುಬಂದಿದೆ.
ಸಂಶೋಧಕ ಗೌರವ್ ಸೈನಿ ಹೇಳಿಕೆಯಂತೆ, "ಪುರುಷರು ಹೆಚ್ಚು ಹೊರಗಿನ ಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತಾರೆ. ಮಹಿಳೆಯರು ಮನೆಯೊಳಗಿನ ಮಾಲಿನ್ಯಕ್ಕೆ ಹೆಚ್ಚು ತುತ್ತಾಗುತ್ತಾರೆಯಾದರೂ, ಪುರುಷರ ಶ್ವಾಸಕೋಶದಲ್ಲಿ ಕಣಗಳ ಸೇರ್ಪಡೆ ಹೆಚ್ಚು ಎಂದಿದ್ದಾರೆ.
"ಉದ್ಯಮ ಕ್ಷೇತ್ರಗಳಲ್ಲಿ ನಡೆಯುವಾಗ ಪುರುಷರ RDD (ಶ್ವಾಸಕೋಶ ಸೇರ್ಪಡೆ ಡೋಸ್) WHO ಮಾನದಂಡಗಳಿಗಿಂತ 10-40 ಪಟ್ಟು ಹೆಚ್ಚು ಎಂದು ಅಧ್ಯಯನ ಎಚ್ಚರಿಕೆ ನೀಡಿದೆ.ಈ ಫಲಿತಾಂಶಗಳು ಶ್ವಾಸಕೋಶ ರೋಗಗಳು, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಪುರುಷರಲ್ಲಿ ಹೆಚ್ಚಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಮಾಸ್ಕ್ ಧರಿಸುವಿಕೆ ಮತ್ತು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಸಂಶೋಧಕರು ಶಿಫಾರಸು ಮಾಡಿದ್ದಾರೆ,(ಏಜೆನ್ಸೀಸ್).