ದೇಶ

ವಿಮಾನದಲ್ಲೇ ಸಿಜೆಪಿ ನಾಯಕರ ಹೈಡ್ರಾಮಾ: ನಿಮ್ಮ ಜನ್ಮಕ್ಕೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದ ಮಹಿಳೆ!: ವಿಡಿಯೋ ವೈರಲ್​ | Jantar Mantar Protest

Jantar Mantar Protest: ಕಾಕ್ರೋಚ್​ ಜನತಾ ಪಾರ್ಟಿ ನಾಯಕರಾದ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರು ಶನಿವಾರ ದೆಹಲಿಯಲ್ಲಿ ತಾವು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಕೂಡಲೇ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಈ ನಾಯಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು.

Jantar Mantar Protest: ಕಾಕ್ರೋಚ್​ ಜನತಾ ಪಾರ್ಟಿ ನಾಯಕರಾದ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರು ಶನಿವಾರ ದೆಹಲಿಯಲ್ಲಿ ತಾವು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಕೂಡಲೇ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಈ ನಾಯಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು.

ಸದ್ಯ ಏರ್ ಇಂಡಿಯಾ ವಿಮಾನದಲ್ಲಿದ್ದ ಸಿಜೆಪಿ ನಾಯಕರನ್ನು ಮಹಿಳಾ ಪ್ರಯಾಣಿಕರೊಬ್ಬರು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯೊಬ್ಬರು ಸಿಜೆಪಿಯ ಮೂವರು ನಾಯಕರಿಗೆ ನಿಮಗೆ ನಾಚಿಕೆಯಾಗಬೇಕು, ಕೆಲಸಕ್ಕೆ ಬಾರದವರು ಎಂದು ಬೈಯ್ಯುತ್ತಿರುವುದು ಕೇಳಿಸುತ್ತದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕೇಳಿದ್ದ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ತಿಳಿಸಲು, ನಾಯಕರೊಂದಿಗೆ ಸಹಕರಿಸಿ ವಿಮಾನದಿಂದ ಕೆಳಗಿಳಿಯುವಂತೆ ದೆಹಲಿ ಪೊಲೀಸರು ಕೇಳಿಕೊಂಡಾಗ ಈ ಘಟನೆ ನಡೆಯಿತು.

ವಿಡಿಯೋ ಸೆರೆಹಿಡಿದ ಅಭಿಜಿತ್ ದೀಪ್ಕೆ!

ದೀಪ್ಕೆ ಅವರು ವಿಮಾನದ ಕಿಟಕಿಯ ಬಳಿ ಕುಳಿತು ಈ ಪ್ರಕ್ರಿಯೆಗಳನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಮುಂಬೈನಿಂದ ಹೊರಟಿದ್ದ ವಿಮಾನ ಬೆಳಿಗ್ಗೆ 10:19 ಕ್ಕೆ ದೆಹಲಿ ನಿಲ್ದಾಣಕ್ಕೆ ಬಂದು ತಲುಪಿತು. ಇದಾದ ತಕ್ಷಣವೇ ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದರು. ನೀವು ನೋಡಬಹುದು, ದೆಹಲಿ ಪೊಲೀಸರು ಇಲ್ಲಿದ್ದಾರೆ. ನಾವು ಈಗಷ್ಟೇ ಬಂದಿದ್ದೇವೆ, ಅವರು ವಿಮಾನದೊಳಗೆ ಪ್ರವೇಶಿಸುತ್ತಿದ್ದಾರೆ ಎಂದು ಅವರು ಲೈವ್ ವಿಡಿಯೋದಲ್ಲಿ ಹೇಳಿದರು.

ಪೊಲೀಸರೊಂದಿಗೆ ಮಾತನಾಡುತ್ತಾ ದೀಪ್ಕೆ, ತಾನು ದೆಹಲಿಗೆ ಬಂಧನಕ್ಕಾಗಿಯೇ ಬಂದಿದ್ದೇನೆ ಮತ್ತು ಅಧಿಕಾರಿಗಳಿಗೆ ಅಂಜುವುದಿಲ್ಲ, ಪೊಲೀಸ್ ಕ್ರಮದಿಂದ ಇತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ವಾದಿಸಿದರು. ಮತ್ತೊಂದು ವಿಡಿಯೋದಲ್ಲಿ, ಪೊಲೀಸರು ತಾವು ಸಿಜೆಪಿ ನಾಯಕರನ್ನು ಬಂಧಿಸುತ್ತಿಲ್ಲ ಎಂದು ಹೇಳುತ್ತಿರುವುದು ಮತ್ತು ಸಹಕರಿಸುವಂತೆ ವಿನಂತಿಸುತ್ತಿರುವುದು ಕೇಳಿಸಿದೆ.

ನಾಯಕರ ಬಂಧನ ಖಂಡಿಸಿದ ಸಿಜೆಪಿ

ಮುಂಬೈನಿಂದ ದೆಹಲಿಗೆ ವಿಮಾನ ಬಂದಿಳಿದ ಕೂಡಲೇ ದೀಪ್ಕೆ, ದಾಸ್ ಮತ್ತು ರಾಂಕಾರನ್ನು ಪೊಲೀಸ್​ ವಶಕ್ಕೆ ತೆಗೆದುಕೊಂಡಿರುವುದನ್ನು ಕಾಕ್ರೋಚ್​ ಜನತಾ ಪಾರ್ಟಿ ತೀವ್ರವಾಗಿ ಖಂಡಿಸಿದೆ. ಈ ಕ್ರಮವನ್ನು ನಿರಂಕುಶ ಆಡಳಿತ ಎಂದು ಕರೆದಿರುವ ಪಕ್ಷ, ಇದು ತಮ್ಮ ನಾಯಕರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿದೆ.

ಅರಾಜಕತೆ ಸೃಷ್ಟಿಸುವವರ ನಾಟಕ ಫ್ಲಾಪ್‌ ಎಂದ ಬಿಜೆಪಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಸಂಸದ ಸಂಬಿತ್ ಪಾತ್ರ ಟೀಕಿಸಿದ್ದು, ಇದು ರಾಷ್ಟ್ರಧಾನಿಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ವಿರೋಧ ಪಕ್ಷಗಳು ನಡೆಸಿದ ಸಂಘಟಿತ ಪ್ರಯತ್ನ ಎಂದು ಆರೋಪಿಸಿದ್ದಾರೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಪಾತ್ರ, ಈ ಪ್ರದರ್ಶನವು ದೇಶದ ಮನಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ, ಭಾರತವು ಶಾಂತಿಯುತವಾಗಿದೆ ಮತ್ತು ಉತ್ತಮ ಆಡಳಿತದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರು ರಾಷ್ಟ್ರ ರಾಜಧಾನಿಯನ್ನು ಬಂಧನದಲ್ಲಿ ಇಡಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಇಂದು ಗುಂಪುಗಾರಿಕೆ (ಮೋಬಕ್ರಸಿ) ವಿರುದ್ಧ ಪ್ರಜಾಪ್ರಭುತ್ವವೇ ಗೆಲುವು ಸಾಧಿಸಿದೆ ಎಂದಿದ್ದಾರೆ.

ರಾಷ್ಟ್ರಪತಿಗಳೊಂದಿಗಿನ ಭೇಟಿಯ ನಂತರದ ಹೇಳಿಕೆಗಳಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಪಾತ್ರ, ಅವರೊಬ್ಬ ಅಯೋಗ್ಯ ನಾಯಕ ಎಂದು ಕರೆದಿದ್ದಲ್ಲದೆ, ರಾಷ್ಟ್ರಪತಿಗಳನ್ನು ಬೀದಿ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಗೆ ಕಾರಣವೇನು..?

ಎಸ್​ಐಆರ್​​ ಪ್ರಕ್ರಿಯೆಗಳಲ್ಲಿ ಲೋಪಗಳು ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಾದಗಳನ್ನು ಮುಂದಿಟ್ಟುಕೊಂಡು ಸಿಜೆಪಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿ ಹಾಗೂ ರಾಷ್ಟ್ರಪತಿ ಭವನದವರೆಗೆ ಮಾರ್ಚ್ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು(ಏಜೆನ್ಸೀಸ್​).