ನವದೆಹಲಿ: ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು (Air India flight) ಸೋಮವಾರ (ಡಿ. 22) ಬೆಳಗ್ಗೆ ಟೇಕ್‌ಆಫ್ ಆದ ಕೆಲವೇ ಕ್ಷಣಗಳ ನಂತರ ಬಲಭಾಗದ ಎಂಜಿನ್‌ನಲ್ಲಿ ತೈಲ ಒತ್ತಡದಲ್ಲಿ ತೀವ್ರ ಕುಸಿತ ಕಂಡುಬಂದಿದ್ದರಿಂದ ರಾಷ್ಟ್ರ ರಾಜಧಾನಿಗೆ ಸುರಕ್ಷಿತವಾಗಿ ಹಿಂತಿರುಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೋಯಿಂಗ್ 777-337 ER ವಿಮಾನದಿಂದ ನಿರ್ವಹಿಸಲ್ಪಡುವ AI887 ವಿಮಾನವು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ 3.20 ಕ್ಕೆ ಹೊರಟಿತ್ತು. ಆ ವೇಳೆ ಪೈಲಟ್ ಬಲಭಾಗದ ಎಂಜಿನ್ಗಳಲ್ಲಿ ಅಸಹಜವಾಗಿ ಕಡಿಮೆ ತೈಲ ಒತ್ತಡವನ್ನು ಗಮನಿಸಿದರು. ಇದಾದ ಬಳಿಕ ತೈಲ ಒತ್ತಡವು ಶೂನ್ಯಕ್ಕೆ ಇಳಿದ ನಂತರ ತುರ್ತು ಕಾರ್ಯವಿಧಾನವನ್ನು ಪ್ರಚೋದಿಸಿದೆ.
ಪೈಲಟ್ಗಳ ಸಮಯಪಜ್ಞೆಯಿಂದ ವಿಮಾನವು ದೆಹಲಿ ನಿಲ್ದಾಣಕ್ಕೆ ವಾಪಾಸ್ಸಾಗಿದ್ದು, ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಿದೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆಗಳಾಗಿಲ್ಲ ಎಂದು ವರದಿಯಾಗಿದೆ.
ವಾಯುಯಾನ ಪರಿಭಾಷೆಯಲ್ಲಿ, ಎಂಜಿನ್ ತೈಲ ಒತ್ತಡವು ಶೂನ್ಯಕ್ಕೆ ಇಳಿಯುವುದನ್ನು ಗಂಭೀರ ಸುರಕ್ಷತಾ ಕಾಳಜಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಎಂಜಿನ್ಗಳನ್ನು ತಂಪಾಗಿಡಲು ಮತ್ತು ಸರಾಗವಾಗಿ ಚಲಿಸಲು ತೈಲ ಅಗತ್ಯವಾಗಿದೆ. ಹಾಗಾಗಿ ಅಸಮರ್ಪಕ ತೈಲ ಒತ್ತಡವು ವೇಗವಾಗಿ ಬಿಸಿಯಾದಾಗ ಬೆಂಕಿ ಹತ್ತಿಕೊಳ್ಳಬಹುದು.
ಮಿಡ್-ಏರ್‌ನಲ್ಲಿ ತಾಂತ್ರಿಕ ಸಮಸ್ಯೆ ಪತ್ತೆ
ಎಂಜಿನ್ ನಿಯತಾಂಕ ಎಚ್ಚರಿಕೆಯ ನಂತರ ವಿಮಾನ ಸಿಬ್ಬಂದಿ ಸ್ಥಾಪಿತ ಸುರಕ್ಷತಾ ಶಿಷ್ಟಾಚಾರಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಏರ್ ಇಂಡಿಯಾ ದೃಢಪಡಿಸಿದೆ.
ಡಿಸೆಂಬರ್ 22 ರಂದು ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ವಿಮಾನವು ಸಿಬ್ಬಂದಿ ತಾಂತ್ರಿಕ ದೋಷದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ದೆಹಲಿಗೆ ಹಿಂತಿರಲು ನಿರ್ಧರಿಸಿದರು. ಈ ವೇಳೆ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ಪ್ರಕಟಣೆ ನೀಡಿದ್ದಾರೆ.
ವಿಮಾನವು ಅಗತ್ಯ ತಾಂತ್ರಿಕ ತಪಾಸಣೆಗೆ ಒಳಗಾಗುತ್ತಿದ್ದು, ಸಂಪೂರ್ಣ ಅನುಮತಿ ಪಡೆದ ನಂತರವೇ ಸೇವೆಯನ್ನು ಪುನರಾರಂಭಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಯಾಣಿಕರಿಗೆ ಸಹಾಯ, ಪರ್ಯಾಯ ವ್ಯವಸ್ಥೆ
ದೆಹಲಿ ನಿಲ್ದಾಣಕ್ಕೆ ವಾಪಾಸ್ಸಾಗಿರುವ ಪ್ರಯಾಣಿಕರಿಗೆ ತಕ್ಷಣವೇ ಸಹಾಯವನ್ನು ಒದಗಿಸಲಾಗುವುದು. ಹಾಗೆಯೇ ಅವರನ್ನು ಶೀಘ್ರವೇ ಮುಂಬೈಗೆ ಕರೆದೊಯ್ಯಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮವು ಮೊದಲ ಆದ್ಯತೆಯಾಗಿದೆ" ಎಂದು ವಕ್ತಾರರು ತಿಳಿಸಿದ್ದಾರೆ (ಏಜೆನ್ಸೀಸ್).