Air India Express: ಹೈದರಾಬಾದ್‌ನಿಂದ ಫುಕೆಟ್‌ಗೆ ತೆರಳಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX 901) ವಿಮಾನವು ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನಲೆ ವಿಮಾನದ ಮುಂಭಾಗದ ಚಕ್ರಕ್ಕೆ ಹಾನಿಯಾಗಿದ್ದು, ಸುಮಾರು 6 ಗಂಟೆಗಳ ತನಕ ರನ್ವೇಯನ್ನು ಮುಚ್ಚಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
IX938 ವಿಮಾನದಲ್ಲಿದ್ದ ಎಲ್ಲಾ 133 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದು, ಯಾವುದೇ ಗಾಯಗಳು ಕಂಡುಬಂದಿಲ್ಲ. ಆದಾಗ್ಯೂ, ಘಟನೆಯ ಬಳಿಕ ತಪಾಸಣೆ ಮತ್ತು ತೆರವುಗೊಳಿಸಲು ಅವಕಾಶ ನೀಡುವ ಸಲುವಾಗಿ ಸಂಜೆ 6 ಗಂಟೆಯವರೆಗೆ ರನ್ವೇಯನ್ನು ಮುಚ್ಚಲಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ, ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ನೋಸ್ ಲ್ಯಾಂಡಿಂಗ್ ಗೇರ್ ಹಾನಿಗೊಳಗಾಗಿದ್ದು, ಇದರ ಪರಿಣಾಮ ರನ್ವೇಯಲ್ಲಿ ಕಠಿಣವಾಗಿ ಸ್ಪರ್ಶಿಸಿತು. ಆದಾಗ್ಯೂ, ತಂಡಗಳು ಪರಿಸ್ಥಿತಿಯನ್ನು ಸುಧಾರಿಸಿ ಮುಂದಿನ ವಿಮಾನಗಳಿಗೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವವರೆಗೂ ಅಧಿಕಾರಿಗಳು ತಾತ್ಕಾಲಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.
ಈ ಘಟನೆಯ ಬಗ್ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ವಿಷಾದ ವ್ಯಕ್ತಪಡಿಸಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮತ್ತು ಥೈಲ್ಯಾಂಡ್‌ನ ವಿಮಾನಯಾನ ಅಧಿಕಾರಿಗಳು ಈ ಹಾರ್ಡ್ ಲ್ಯಾಂಡಿಂಗ್‌ಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).