ಕೊಚ್ಚಿ: ಸೌದಿ ಅರೇಬಿಯಾದ ಜೆಡ್ಡಾದಿಂದ, ಕೇರಳದ ಕೋಝಿಕ್ಕೋಡ್ ಕಡೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನವು ಇಂದು ಬೆಳಿಗ್ಗೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಬಲಗಡೆ ಮುಖ್ಯ ಲ್ಯಾಂಡಿಂಗ್ ಗೇರ್ ಮತ್ತು ಟೈರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಸುರಕ್ಷತಾ ಕಾರಣಗಳಿಂದ 160 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಕೊಚ್ಚಿಗೆ ತಿರುಗಿಸಲಾಗಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (CIAL), IX 398 ವಿಮಾನವು ಸಂಪೂರ್ಣ ತುರ್ತು ಕಾರ್ಯವಿಧಾನಗಳಲ್ಲಿ ಬೆಳಿಗ್ಗೆ 9:07 ಕ್ಕೆ ಸುರಕ್ಷಿತವಾಗಿ ಇಳಿದಿದೆ. ಯಾವುದೇ ಪ್ರಯಾಣಿಕರಿಕೆ ಗಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು, ಸಿಬ್ಬಂದಿ ಪರಿಸ್ಥಿತಿಗಳನ್ನು ಚೆನ್ನಾಗಿ ನಿಭಾಯಿಸಿದ್ದು, ಯಾವುದೇ ಅಡೆತಡೆಗಳಲ್ಲಿದೆ ಲ್ಯಾಂಡಿಂಗ್ ಆಗಿದೆ. ಹಾಗೆಯೇ, ತುರ್ತು ಸ್ಥಿತಿಗೆ ಅಗ್ನಿಶಾಮಕ ದಳ, ಸಿಸಿಎಫ್ ಮತ್ತು ತುರ್ತು ಸೇವೆಗಳು ಸಜ್ಜುಗೊಂಡಿದ್ದವು ಎಂದು ದೃಢಪಡಿಸಿದ್ದಾರೆ. ಪಿಟಿಐ ವರದಿಯ ಪ್ರಕಾರ, ವಿಮಾನಯಾನ ಸಂಸ್ಥೆಯು ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಸುವ ನಿರೀಕ್ಷೆಯಿದೆ, ಆದರೆ ಪ್ರಯಾಣಿಕರಿಗೆ ಮುಂದಿನ ಪ್ರಯಾಣಕ್ಕೆ ನೆರವಾಗಲು ಅನುಮತಿ ನೀಡಿದೆ ಎಂದು ತಿಳಿಸಿದೆ.
ಈ ಘಟನೆಯ ಬಗ್ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಮಾತನಾಡಿದ್ದು, ಲ್ಯಾಂಡಿಂಗ್ ನಂತರದ ತಪಾಸಣೆಯಲ್ಲಿ ಬಲಗಡೆಯ ಎರಡು ಟೈರ್‌ಗಳು ಸ್ಪೋಟಗೊಂಡಿದ್ದವು. ಇದು ಜೆಡ್ಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ವಿದೇಶಿ ವಸ್ತುವಿನಿಂದ ಟೈರ್ ಹಾನಿಯಾಗಿರುವ ಸಂದೇಹವಿದೆ. ಹಾಗಾಗಿ ಮುನ್ನಚ್ಚರಿಕೆಗಾಗಿ ವಿಮಾನವನ್ನು ಕೊಚ್ಚಿಗೆ ತಿರುಗಿಸಿ ಲ್ಯಾಂಡ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಅವರನ್ನು ರಸ್ತೆ ಮಾರ್ಗದಿಂದ ಕೋಝಿಕ್ಕೋಡ್‌ಗೆ ಕಳುಹಿಸುತ್ತಿದ್ದೇವೆ. ಪೈಲಟ್ರ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಆಹಾರ,ವಿಶ್ರಾಂತಿ ಮತ್ತು ಪರ್ಯಾಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ: ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ಇದೇ ವರ್ಷದ ಡಿಸೆಂಬರ್ 2 ರಂದು, ಕುವೈತ್‌ನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಬಂದ ಹಿನ್ನಲೆ, ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು (ಏಜೆನ್ಸೀಸ್).