Paper Leak Bill 2026 | ಪೇಪರ್ ಲೀಕ್ ಜಾಲ ಸಂಪೂರ್ಣ ಧ್ವಂಸ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ 
ದೇಶ

ಪೇಪರ್ ಲೀಕ್ ಜಾಲ ಸಂಪೂರ್ಣ ಧ್ವಂಸ!...ಲೋಕಸಭೆಯಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರದ ಬಳಿಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತು | Paper Leak Bill 2026

ನವದೆಹಲಿ: ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ಸರ್ಕಾರ, ಜುಲೈ 29ರ ಬುಧವಾರದಂದು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ-2026 ಅನ್ನು ಅಂಗೀಕರಿಸಿದೆ. ಸಂಸತ್ತಿನಲ್ಲಿ ವಿಪಕ್ಷಗಳ ತೀವ್ರ ಗದ್ದಲ ಮತ್ತು ಧರಣಿಯ ನಡುವೆಯೇ ಈ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.
ಮಸೂದೆ ಅಂಗೀಕಾರಗೊಂಡ ನಂತರ ನೂತನ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕಾನೂನು ಚೌಕಟ್ಟನ್ನು ತರಲು ಲೋಕಸಭೆಯು ಈ ವಿಧೇಯಕವನ್ನು ಅಂಗೀಕರಿಸಿದೆ. ಕಠಿಣ ಶಿಕ್ಷೆಗಳು, ಫಾಸ್ಟ್ ಟ್ರ್ಯಾಕ್ ಕೋರ್ಟ್, ಬಲವರ್ಧಿತ ತನಿಖಾ ವ್ಯವಸ್ಥೆ ಹಾಗೂ ಪರೀಕ್ಷಾ ವಂಚನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಈ ವಿಧೇಯಕವು ದೇಶದಲ್ಲಿನ ಪೇಪರ್ ಲೀಕ್ ಜಾಲವನ್ನು ಧ್ವಂಸ ಮಾಡುವ ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ನ್ಯಾಯಸಮ್ಮತತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಆಡಳಿತ-ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ

ಇನ್ನೊಂದೆಡೆ, ನೀಟ್ ಪೇಪರ್ ಲೀಕ್ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂಬ ವಿಚಾರ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಆದೇಶ ನೀಡಿದ್ದರು. ಅವರು ನಮ್ಮ ದೇಶದ ವಿದ್ಯಾರ್ಥಿಗಳ ದೇಹಕ್ಕೆ ಪೆಲೆಟ್‌ಗಳು ತೂರುವಂತೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಲು ಗೃಹ ಸಚಿವರಿಗೆ ಅಥವಾ ಪ್ರಧಾನ ಮಂತ್ರಿಗೆ ಮಾತ್ರ ಅಧಿಕಾರವಿರುತ್ತದೆ ಎಂದರು.
ರಾಹುಲ್ ಗಾಂಧಿ ಅವರ ಈ ಆರೋಪವನ್ನು ಆಡಳಿತಾರೂಢ ಬಿಜೆಪಿ ಮತ್ತು ಎನ್‌ಡಿಎ ಸದಸ್ಯರು ತೀವ್ರವಾಗಿ ಖಂಡಿಸಿದರು. ಕೇಂದ್ರ ಗೃಹ ಸಚಿವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ, ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸತ್ತಿನಲ್ಲಿ ಆರೋಪ ಮಾಡುವಾಗ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು ಎಂದು ರಾಹುಲ್ ಗಾಂಧಿ ಅವರಿಗೆ ನೆನಪಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ನೀವು ವಿಪಕ್ಷ ನಾಯಕರಾಗಿದ್ದುಕೊಂಡು ಯಾವ ಆಧಾರದ ಮೇಲೆ ಈ ಮಾತು ಹೇಳುತ್ತಿದ್ದೀರಿ..? ನಿಮಗಿದನ್ನು ಯಾರು ಹೇಳಿದರು..? ನೀವು ಹೇಳಿರುವುದು ಸಂಪೂರ್ಣ ಸುಳ್ಳು. ಇದನ್ನು ಕಡತದಿಂದ ತೆಗೆದುಹಾಕಬೇಕು ಮತ್ತು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು. ಇದು ಅತ್ಯಂತ ಗಂಭೀರ ಆರೋಪವಾಗಿದ್ದು, ಅವರು ತಮ್ಮ ಸ್ಥಾನ ಮತ್ತು ಹಕ್ಕುಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು(ಏಜೆನ್ಸೀಸ್​).