Asaduddin Owaisi > ಯುಪಿ ಗದ್ದುಗೆ ಹಿಡಿಯಲು ಓವೈಸಿ ಮಾಸ್ಟರ್ ಪ್ಲಾನ್!
ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಿಜವಾಗಿಯೂ ಆಸಕ್ತಿಯಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಅಥವಾ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷ ಮುಕ್ತವಾಗಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.
ಇಂಡಿಯಾ ಟಿವಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೈದರಾಬಾದ್ ಲೋಕಸಭಾ ಸದಸ್ಯ ಓವೈಸಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವ ಎಐಎಂಐಎಂ ನಿರ್ಧಾರವನ್ನು ಪ್ರಶ್ನಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದೇ ವೇಳೆ ಕೇಸರಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ತಮ್ಮ ಪಕ್ಷ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
ಒಟ್ಟಾಗಿ ಬಿಜೆಪಿಯನ್ನು ಸೋಲಿಸಬೇಕಾಗಿದೆ!...
ನಾವು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಯಾಕೆ ಸಮಸ್ಯೆ ಆಗಬೇಕು..? ಬಿಹಾರ ಚುನಾವಣೆಯ ಸಂದರ್ಭದಲ್ಲಿ ನಾವು ಮೈತ್ರಿ ಪ್ರಸ್ತಾಪ ಮುಂದಿಟ್ಟು ಕೇವಲ ಆರು ಸ್ಥಾನಗಳನ್ನು ಕೇಳಿದ್ದೆವು. ಆದರೆ, ವಿರೋಧ ಪಕ್ಷಗಳು ಅದಕ್ಕೆ ಸಿದ್ಧವಿರಲಿಲ್ಲ. ಈಗ ಉತ್ತರ ಪ್ರದೇಶದಲ್ಲೂ ಅಷ್ಟೇ. ಅವರಿಗೆ ಬಿಜೆಪಿಯನ್ನು ಸೋಲಿಸುವ ಇಚ್ಛೆಯಿದ್ದರೆ, ಮೈತ್ರಿ ಮಾಡಿಕೊಳ್ಳಲಿ. ನಾವು ಮೈತ್ರಿಗೆ ಸಿದ್ಧರಿದ್ದೇವೆ. ನಾವೆಲ್ಲರೂ ಒಟ್ಟಾಗಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಹೇಳಿದರು.
ಅವೆರೆಡು ಪಕ್ಷಗಳು ಮೈತ್ರಿಗೆ ಸಿದ್ಧರಿದ್ದರೆ, ನಾವು ಸೀಟು ಹಂಚಿಕೆ ಒಪ್ಪಂದದ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ಬಿಹಾರ ಚುನಾವಣೆಯ ಸಮಯದಲ್ಲಿ ಅಖಿಲೇಶ್ ಯಾದವ್ ನಮ್ಮ ವಿರುದ್ಧ ಪ್ರಚಾರ ಮಾಡಿ, ನಮ್ಮ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸಿದ್ದರು. ಆದರೂ, ತಮ್ಮನ್ನು ತಾವು ಜಾತ್ಯತೀತ ಎಂದು ಕರೆದುಕೊಳ್ಳುವ ಪ್ರತಿಯೊಬ್ಬರ ಜೊತೆಯೂ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ. ಬಿಎಸ್‌ಪಿ ಮತ್ತು ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಕ್ಷದ ಜೊತೆಗಿನ ಸಂಭಾವ್ಯ ಮೈತ್ರಿಯ ವದಂತಿಗಳನ್ನು ತಳ್ಳಿಹಾಕಿದ ಓವೈಸಿ, ಬಿಜೆಪಿಯನ್ನು ಸೋಲಿಸಲು ಬದ್ಧವಾಗಿರುವ ಯಾರೊಂದಿಗಾದರೂ ಕೈಜೋಡಿಸಲು ತಾವು ಮುಕ್ತವಾಗಿರುವುದಾಗಿ ತಿಳಿಸಿದರು.
ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಸ್ಲಿಮರು ಶಿಕ್ಷಣ ಪಡೆಯುವುದನ್ನು ಬಯಸುವುದಿಲ್ಲ ಎಂದು ಆರೋಪಿಸಿದ ಓವೈಸಿ, ಅಜಂ ಖಾನ್ ಅವರ ಜೌಹರ್ ವಿಶ್ವವಿದ್ಯಾಲಯದ ಮೇಲಿನ ಬುಲ್ಡೋಜರ್ ಕ್ರಮಕ್ಕೆ ಪ್ರತಿಕ್ರಿಯಿಸುತ್ತಾ, ಮುಸ್ಲಿಮರಿಗೆ ಶಿಕ್ಷಣ ನೀಡುವುದರಿಂದ ಮಾತ್ರ ವಿಕಸಿತ ಭಾರತದ ಕನಸನ್ನು ನನಸು ಮಾಡಲು ಸಾಧ್ಯ ಎಂದು ಹೇಳಿದರು.
ಮುಸ್ಲಿಮರನ್ನು ಗುರಿಯಾಗಿಸಲು ಬಿಜೆಪಿ ಏಕರೂಪ ನಾಗರಿಕ ಸಂಹಿತೆಯನ್ನು (UCC) ತರಲು ಬಯಸಿದ್ದು, ಯಾವಾಗಲೂ ಮಸೂದೆಗಳನ್ನು ಅವಸರದಲ್ಲೇ ಅಂಗೀಕರಿಸುತ್ತದೆ ಎಂದರು. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯೊಳಗಿನ ಬಂಡಾಯದ ಕುರಿತು ಮಾತನಾಡಿದ ಓವೈಸಿ, 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನಂತರವೂ ಈ ಬಿಕ್ಕಟ್ಟು ಹೇಗೆ ಸಂಭವಿಸಿತು ಮತ್ತು ನಾಯಕರು ಯಾಕೆ ಪಕ್ಷ ತೊರೆದರು ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯನ್ನೇ ಕೇಳಬೇಕು. ಅವರೆಲ್ಲಾ ಸುಳ್ಳುಗಾರರು, ಸೋಲುತ್ತಾರೆ ಎಂದು ನಾನು ಮೊದಲೇ ಎಚ್ಚರಿಸಿದ್ದೆ, ಆದರೆ ಅವರು ಅದನ್ನು ನಿರ್ಲಕ್ಷಿಸಿದ್ದರು ಎಂದು ಓವೈಸಿ ತಿಳಿಸಿದರು(ಏಜೆನ್ಸೀಸ್).