ಸಾಂದರ್ಭಿಕ ಚಿತ್ರ 
ದೇಶ

HIV ಇಲ್ಲದಿದ್ದರೂ ‘ಪಾಸಿಟಿವ್’ ಅಂತ ವರದಿ! AIIMS ರಿಷಿಕೇಶ್‌ಗೆ 60 ಸಾವಿರ ರೂ. ದಂಡ | AIIMS Rishikesh fined Rs 60,000

ಪ್ರಮುಖ ಮುಖ್ಯಾಂಶಗಳು

  • AIIMS ರಿಷಿಕೇಶ್‌ಗೆ 60 ಸಾವಿರ ರೂಪಾಯಿ ದಂಡ ವಿಧಿಸಿದ
  • HIV ಪರೀಕ್ಷೆ ಮಾಡದೇ ವ್ಯಕ್ತಿಗೆ ‘ಪಾಸಿಟಿವ್’ ಎಂದು ರಿಪೋರ್ಟ್​
  • ಬೇರೆ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದಾಗ ವ್ಯಕ್ತಿಗೆ ‘HIV ನೆಗೆಟಿವ್​’
Wrong hiv report: ಹೆಚ್ಐವಿ ಪರೀಕ್ಷೆ ಮಾಡದೇ ವ್ಯಕ್ತಿಯ ವೈದ್ಯಕೀಯ ದಾಖಲೆಗಳಲ್ಲಿ ‘HIV ಪಾಸಿಟಿವ್’ ಎಂದು ನಮೂದಿಸಿದ್ದ ಪ್ರಕರಣದಲ್ಲಿ AIIMS(ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ರಿಷಿಕೇಶ್‌ಗೆ 60 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಹರಿದ್ವಾರ್ ಜಿಲ್ಲಾ ಗ್ರಾಹಕರ ಆಯೋಗ ನೀಡಿದ್ದ ಆದೇಶವನ್ನು ಉತ್ತರಾಖಂಡ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಎತ್ತಿಹಿಡಿದಿದೆ.
ಈ ಪ್ರಕರಣದಲ್ಲಿ 50 ಸಾವಿರ ರೂ. ಪರಿಹಾರ ಮತ್ತು 10 ಸಾವಿರ ರೂ. ಕಾನೂನು ಹೋರಾಟದ ವೆಚ್ಚ ಸೇರಿ ಒಟ್ಟು 60 ಸಾವಿರ ರೂ. ಪಾವತಿಸುವಂತೆ ಎಐಐಎಂಎಸ್​ಗೆ ಸೂಚಿಸಲಾಗಿದೆ. ಎಐಐಎಂಎಸ್​ಸಲ್ಲಿಸಿದ್ದ ಮೇಲ್ಮನವಿಯನ್ನು ರಾಜ್ಯ ಆಯೋಗ ತಿರಸ್ಕರಿಸಿದೆ. 2014ರ ಜುಲೈ 12ರಂದು ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದರು. ಜುಲೈ 15ರಂದು ವೈದ್ಯರನ್ನು ಸಂಪರ್ಕಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಎಐಐಎಂಎಸ್(AIIMS) ರಿಷಿಕೇಶ್‌ಗೆ ಕಳುಹಿಸಲಾಗಿತ್ತು. ಜುಲೈ 16ರಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಗಿದ್ದರು.

2 ಆಸ್ಪತ್ರೆಗಳ ವರದಿಯಲ್ಲಿ ನೆಗೆಟಿವ್

ಈ ಅವಧಿಯಲ್ಲಿ, ಅವರ ವೈದ್ಯಕೀಯ ದಾಖಲೆಗಳಲ್ಲಿ ಹೆಚ್ಐವಿ ಪಾಸಿಟಿವ್ ಎಂದು ನಮೂದಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆದರೆ ಬಳಿಕ ಅವರು ಡೆಹ್ರಾಡೂನ್‌ನ ಶ್ರೀ ಗುರು ರಾಮ್ ರೈ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್ ಹಾಗೂ ಶ್ರೀ ಮಹಂತ್ ಇಂದಿರೇಶ್ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಎರಡೂ ಆಸ್ಪತ್ರೆಗಳ ವರದಿಯಲ್ಲಿ ಹೆಚ್ಐವಿ ನೆಗೆಟಿವ್ ಎಂದು ಬಂದಿತ್ತು.

ಹೆಚ್ಐವಿ ಟೆಸ್ಟ್ ಮಾಡಲೇ ಇಲ್ಲ

ಪ್ರಕರಣದ ವಿಚಾರಣೆ ವೇಳೆ ಎಐಐಎಂಎಸ್ ಪರವಾಗಿ, ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸುವ ಐಸಿಟಿಸಿ(Integrated Counseling and Testing Centre) ಇರಲಿಲ್ಲ. ಹೀಗಾಗಿ ಹೆಚ್ಐವಿ ಪರೀಕ್ಷೆ ಮಾಡಿಲ್ಲ, ವ್ಯಕ್ತಿಯನ್ನು ಅಧಿಕೃತವಾಗಿ ಹೆಚ್ಐವಿ ಪಾಸಿಟಿವ್ ಎಂದು ಹೇಳಿಲ್ಲ ಎಂದು ವಾದಿಸಲಾಗಿತ್ತು. ಎಐಐಎಂಎಸ್​ನದೇ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ, ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಡಿಸ್ಚಾರ್ಜ್ ದಾಖಲೆಗಳಲ್ಲಿ ವ್ಯಕ್ತಿಯನ್ನು ಪದೇಪದೇ ಹೆಚ್ಐವಿ ಪಾಸಿಟಿವ್ ಎಂದು ನಮೂದಿಸಿರುವುದು ಕಂಡುಬಂದಿದೆ ಎಂದು ಆಯೋಗ ಹೇಳಿದೆ.

60 ಸಾವಿರ ರೂ. ದಂಡ

ಈ ಪ್ರಕರಣದಲ್ಲಿ ಹರಿದ್ವಾರ್ ಜಿಲ್ಲಾ ಗ್ರಾಹಕರ ಆಯೋಗವು 2019ರ ಏಪ್ರಿಲ್ 22ರಂದು ಎಐಐಎಂಎಸ್ ರಿಷಿಕೇಶ್‌ಗೆ 50 ಸಾವಿರ ರೂ. ಪರಿಹಾರ ಹಾಗೂ 10 ಸಾವಿರ ರೂ. ಕಾನೂನು ಹೋರಾಟದ ವೆಚ್ಚ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎಐಐಎಂಎಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ಉತ್ತರಾಖಂಡ ರಾಜ್ಯ ಗ್ರಾಹಕರ ಆಯೋಗ ತಿರಸ್ಕರಿಸಿದೆ.(ಏಜೆನ್ಸೀಸ್​).