Sumitro Chatterjee | ಸೋನಿಯಾ ಗಾಂಧಿಗೆ ಪತ್ರ ಬರೆದು ಕ್ಷಮೆಯಾಚಿಸುವಂತೆ ಆಗ್ರಹಿಸಿದ ಬಂಕಿಮ ಚಂದ್ರರ ವಂಶಸ್ಥ! 
ದೇಶ

ಇದು ಐತಿಹಾಸಿಕ ತಪ್ಪಿನ ನಿರ್ಲಜ್ಜ ಪುನರಾವರ್ತನೆ!...ಸೋನಿಯಾ ಗಾಂಧಿಗೆ ಪತ್ರ ಬರೆದು ಕ್ಷಮೆಯಾಚಿಸುವಂತೆ ಆಗ್ರಹಿಸಿದ ಬಂಕಿಮ ಚಂದ್ರರ ವಂಶಸ್ಥ! | Sumitro Chatterjee

ನಿನ್ನೆ (ಆಗಸ್ಟ್ 15) ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಂದು ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅದನ್ನು ಮಧ್ಯದಲ್ಲೇ ನಿಲ್ಲಿಸಲು ಪ್ರಯತ್ನಿಸಲಾಗಿತ್ತು ಎಂದು ಬಿಜೆಪಿ ಶಾಸಕ ಹಾಗೂ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರ ವಂಶಸ್ಥ ಸುಮಿತ್ರೋ ಚಟರ್ಜಿ(Sumitro Chatterjee) ಆರೋಪಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೇಶದ ಜನರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದಾರೆ.

ದೇಶವು ತನ್ನ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಸುಸಮಯದಲ್ಲಿ ನಡೆದ ಈ ಘಟನೆಯು ಕೇವಲ ದುರದೃಷ್ಟಕರವಷ್ಟೇ ಅಲ್ಲ, ಐತಿಹಾಸಿಕ ತಪ್ಪಿನ ನಿರ್ಲಜ್ಜ ಪುನರಾವರ್ತನೆ ಎಂದು ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಚಟರ್ಜಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ನೈಹಾಟಿ ಕ್ಷೇತ್ರವನ್ನು ಪ್ರತಿನಿಧಿಸುವ ಸುಮಿತ್ರೋ ಚಟರ್ಜಿ, ತಾವು ಒಬ್ಬ ಸಾಮಾನ್ಯ ಪ್ರಜೆ, ದೇಶಪ್ರೇಮಿ ಮತ್ತು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರ ನೇರ ವಂಶಸ್ಥನಾಗಿ ಈ ಪತ್ರವನ್ನು ಬರೆಯುತ್ತಿದ್ದು, ಈ ಘಟನೆಯಿಂದ ತಮಗೆ ತೀವ್ರ ನೋವು ಉಂಟಾಗಿದೆ ಎಂದಿದ್ದಾರೆ.

ವಂದೇ ಮಾತರಂ ಮಹತ್ವ ಸಾರಿದ ಸುಮಿತ್ರೋ ಚಟರ್ಜಿ

ವಂದೇ ಮಾತರಂ ಮಂತ್ರವು ಇಡೀ ದೇಶವನ್ನು ದೇಶಭಕ್ತಿಯ ಧರ್ಮಕ್ಕೆ ಪ್ರೇರೇಪಿಸಿತು ಎಂಬ ಶ್ರೀ ಅರವಿಂದರ ಮಾತುಗಳನ್ನು ಉಲ್ಲೇಖಿಸಿದ ಚಟರ್ಜಿ, ಸ್ವತಂತ್ರ ಭಾರತದ ಮಣ್ಣಿನಲ್ಲಿ ಈ ಗೀತೆಯನ್ನು ಪೂರ್ಣವಾಗಿ ಪಠಿಸಲು ಹಿಂಜರಿಯುವುದು ಖುದೀರಾಮ್ ಬೋಸ್ ಅವರಂತಹ ಅಮರ ಹುತಾತ್ಮರ ಬಲಿದಾನಕ್ಕೆ ಮಾಡಿದ ಅಪಮಾನ ಎಂದು ಹೇಳಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಗೀತೆಯ ಪ್ರಮುಖ ಪಾತ್ರವನ್ನು ಅವರು ಸ್ಮರಿಸಿದರು.
1896 ರ ಕೋಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಠಾಗೋರ್ ಅವರು ಈ ಗೀತೆಯನ್ನು ಗಾಯನ ಮಾಡಿದ್ದು, 1905 ರ ಬನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ ಸರಳಾ ದೇವಿ ಚೌಧುರಾಣಿ ಅವರು ಪಠಿಸಿದ್ದು, 1909 ರ ದೇಶದ್ರೋಹದ ವಿಚಾರಣೆ ವೇಳೆ ಬಾಲ ಗಂಗಾಧರ ತಿಲಕ್ ಅವರ ಬೆಂಬಲಿಗರು ಹಾಡಿದ್ದು ಹಾಗೂ 1938 ರಲ್ಲಿ ನೈಜಾಮನ ನಿರ್ಬಂಧಗಳ ಹೊರತಾಗಿಯೂ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದನ್ನು ಹೋರಾಟದ ಮಂತ್ರವನ್ನಾಗಿ ಬಳಸಿದ್ದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ
ಕಾಂಗ್ರೆಸ್ ಪಕ್ಷದ ಈ ದ್ವಿಮುಖ ನೀತಿ ಹೊಸದೇನಲ್ಲ ಎಂದು ಆರೋಪಿಸಿದ ಚಟರ್ಜಿ, 1937 ರ ಅಕ್ಟೋಬರ್‌ನಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರ ಆಕ್ಷೇಪಣೆಗಳಿಗೆ ಮಣಿದು ಕಾಂಗ್ರೆಸ್ ಈ ಗೀತೆಯನ್ನು ತುಂಡರಿಸಿತ್ತು ಎಂಬುದನ್ನು ನೆನಪಿಸಿಕೊಂಡರು. ಅಂದಿನ ಆ ರಾಜಿಯ ಕಪ್ಪು ನೆರಳು ಇಂದು ಮತ್ತೆ ಪಕ್ಷದ ನಡವಳಿಕೆಯಲ್ಲಿ ಕಾಣಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಛಾತ್ರ ಪರಿಷತ್ ಕೂಡ ಮಂತ್ರ ಮೋದೆರ್ ಸಂಜೀವನ್ - ವಂದೇ ಮಾತರಂ ಎಂಬ ಘೋಷಣೆಯನ್ನು ಬಳಸುತ್ತದೆ ಎಂಬುದನ್ನು ಉಲ್ಲೇಖಿಸಿದ ಅವರು, ವಾಸ್ತವ ಹೀಗಿರುವಾಗ ಪಕ್ಷದ ಹಿರಿಯ ನಾಯಕರೆನಿಸಿಕೊಂಡವರಿಗೆ ಈ ಗೀತೆಯ ಬಗ್ಗೆ ಏಕಿಷ್ಟು ಅಸಮಾಧಾನ ಎಂದು ಪ್ರಶ್ನಿಸಿದ್ದಾರೆ.

ವಂದೇ ಮಾತರಂ ರಾಷ್ಟ್ರೀಯ ಸಂಕೇತ!...

ವಂದೇ ಮಾತರಂ ಯಾವುದೇ ಒಂದು ರಾಜಕೀಯ ಪಕ್ಷದ ಸ್ವತ್ತಲ್ಲ, ಅದು ಇಡೀ ದೇಶದ ಸಾಮೂಹಿಕ ಸ್ಮೃತಿ, ಬಂಕಿಮ ಚಂದ್ರರ ಶಾಶ್ವತ ಪರಂಪರೆ ಮತ್ತು ಹುತಾತ್ಮರ ರಕ್ತ ಹಾಗೂ ತ್ಯಾಗದಿಂದ ಗಳಿಸಿದ ಪವಿತ್ರ ರಾಷ್ಟ್ರೀಯ ಸಂಕೇತವಾಗಿದೆ. ಈ ಗೀತೆಯನ್ನು ಗೌರವಿಸುವುದು ಎಂದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಗೌರವಿಸಿದಂತೆ ಎಂದು ಚಟರ್ಜಿ ಪ್ರತಿಪಾದಿಸಿದ್ದಾರೆ. ಇತಿಹಾಸ ಯಾರನ್ನೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ತಮ್ಮ ಸ್ವಂತ ಸ್ವಾತಂತ್ರ್ಯದ ಮಂತ್ರವನ್ನು ಗೌರವಿಸಲು ವಿಫಲವಾಗುವ ಯಾವುದೇ ನಾಯಕತ್ವವನ್ನು ಇತಿಹಾಸವು ಮರೆವಿನ ಕತ್ತಲೆಗೆ ತಳ್ಳುತ್ತದೆ ಎಂದು ಹೇಳಿದ್ದಾರೆ.
ಈ ಘಟನೆಯು ಪಶ್ಚಿಮ ಬಂಗಾಳದ ಜನರ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ ಎಂದು ಹೇಳಿದ ಸುಮಿತ್ರೋ ಚಟರ್ಜಿ, ಸೋನಿಯಾ ಗಾಂಧಿ ಅವರು ಆತ್ಮಾವಲೋಕನ ಮಾಡಿಕೊಂಡು ದೇಶದ ಜನರಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದ ಜನರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ(ಏಜೆನ್ಸೀಸ್​).