ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ಸಂದರ್ಭದಲ್ಲೇ ಆರಂಭವಾಗಿರುವ ಅಧಿಕಾರ ಹಂಚಿಕೆ ಗೊಂದಲ ಸದ್ಯದಲ್ಲೇ ಬಗೆಹರಿಯಬಹುದು ಎಂದು ಕಾತರದಿಂದ ಕಾದಿದ್ದ ಪಕ್ಷದ ಸಚಿವರು, ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಭಾನುವಾರದ ಬೆಳವಣಿಗೆಯಲ್ಲಿ ಮೂರು ಪ್ರಮುಖ ಸಂಗತಿಗಳು ನಡೆದಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಮಾಧ್ಯಮದ ಮುಂದೆ ಹಾಜರಾಗಿ, "ಹೈಕಮಾಂಡ್ ತೀರ್ಮಾನ ಮಾಡುತ್ತದೆ' ಎಂದು ಸ್ಪಷ್ಟಪಡಿಸಿದರು. "ಈಗ ನಡೆದ ವಿದ್ಯಮಾನದ ಬಗ್ಗೆ ಹೇಳಲು ನನ್ನ ಬಳಿ ಏನೂ ಇಲ್ಲ. ರಾಜ್ಯದಲ್ಲಿನ ಸದ್ಯದ ಬೆಳವಣಿಗೆ ಬಗ್ಗೆ ನಾನು ಏನೂ ಹೇಳಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದು ತಮ್ಮ ಅಸಹಾಯಕತೆ ಹೊರಹಾಕಿದರು.
"ಮೂರು ದಿನದಿಂದ ಇಲ್ಲೆ ಇದ್ದೇನೆ. ಮಳೆ ಚಳಿ ಬಿಸಿಲು ಎನ್ನದೇ ಮನೆ ಬಳಿ ಬರುತ್ತಿದ್ದೀರಿ, ನನಗೆ ತುಂಬಾ ಬೇಜಾರಾಗಿದೆ. ದಯವಿಟ್ಟು ನೀವೂ ಇಲ್ಲಿ ಕಾಯುವುದು ಬೇಡ (ಮಾಧ್ಯಮದವರಿಗೆ). ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ವಿಷಯದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ' ಎಂದು ಹೇಳಿದರು. ಸಂಜೆ ನಡೆದ ವಿದ್ಯಮಾನದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ರ್ಖಗೆಯವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು. ಈ ಸಮಾಲೋಚನೆ ವೇಳೆ "ಸಂಧಾನ' ಪ್ರಕ್ರಿಯೆ ಪ್ರಸ್ತಾಪವಾಗಿದೆ ಎಂದು ಹೇಳಲಾಗುತ್ತಿದೆ. ಈ ವಿದ್ಯಮಾನ ಮುಂದುವರಿದು ಜಾರ್ಜ್ ಅವರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಿದ್ದು ವಿಶೇಷ. "ಸಂದೇಶ' ವಿನಿಮಯ ನಡೆದಿದ್ದು, ಇದು ಮುಂದಿನ ಬೆಳವಣಿಗೆಗೆ ಮಹತ್ವದ್ದೆನಿಸಿದೆ.
ದಿನದ ಮೂರನೇ ಪ್ರಮುಖ ವಿದ್ಯಮಾನ ಎಂದರೆ, ನಾನೂ ಸಿಎಂ ರೇಸ್ನಲ್ಲಿದ್ದೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಸರ್ಕಾರ ಯಾರೋ ಒಬ್ಬರಿಂದ ಬಂದಿದ್ದಲ್ಲ. ಎಲ್ಲ ಶಾಸಕರ ಪ್ರಯತ್ನ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ಹೊರಹಾಕಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪರೋಕ್ಷವಾಗಿ ಕೆಣಕಿದಂತಿದೆ.
ನವೆಂಬರ್ 26ರ ಬಳಿಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಒಂದು ತೀರ್ಮಾನ ಆಗುವ ಸಾಧ್ಯತೆ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಪ್ರಮುಖರ ಅಭಿಪ್ರಾಯ ಸಂಗ್ರಹಿಸಿರುವ ರ್ಖಗೆಯವರು ಈ ಸಭೆಯಲ್ಲಿ ವಿಷಯ ಮಂಡಿಸುವರು. ಅದರ ಆಧಾರದಲ್ಲಿ ಈ ಬೆಳವಣಿಗೆಗೆ ಅಲ್ಪ ವಿರಾಮವೋ, ಪೂರ್ಣ ವಿರಾಮವೋ ಎಂಬುದು ನಿರ್ಧಾರವಾಗಲಿದೆ.
ಎಲ್ಲವೂ ಚರ್ಚೆಯಾಗಿದೆ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿ. ಪರಮೇಶ್ವರ, ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಐವರು ಸಚಿವರು ಊಟಕ್ಕೆ ಸೇರಿದ್ದೆವು. ಅಲ್ಲಿ ರಾಜಕೀಯ, ಇಲಾಖೆಯ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು. ಕಾಂಗ್ರೆಸ್ ಹೈಕಮಾಂಡ್ ಬಿಟ್ಟು ಏನೂ ತೀರ್ಮಾನ ಆಗುವುದಿಲ್ಲ. ಹೈಕಮಾಂಡ್ ಇಲ್ಲಿವರೆಗೂ ಲೀಡರ್ಶಿಪ್ ಬದಲಾವಣೆ, ಸಂಪುಟ ಪುನಾರಚನೆ ಆಗಲಿದೆ ಎಂದು ಎಲ್ಲಿಯೂ ಹೇಳಿಲ್ಲ. ಸಿಎಂ ಆಯ್ಕೆ ವೇಳೆ ಎಐಸಿಸಿಯಿಂದ ವೀಕರು ಬಂದು ಸಿಎಲ್ಪಿ ಸಭೆ ನಡೆಸಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದರು. ಆದರೆ, ಎರಡೂವರೆ ವರ್ಷಕ್ಕೆ ಸಿಎಂ ಅಂತ ಹೇಳಿರಲಿಲ್ಲ. ಮಧ್ಯದಲ್ಲಿ ಬದಲಾಯಿಸುವುದು ಹೈಕಮಾಂಡ್ಗೆ ಬಿಟ್ಟದ್ದು. ಹಿಂದೆ ಎಲ್ಲ ಮಾಡಿಲ್ಲವೇ? ಬಂಗಾರಪ್ಪ ಅವರನ್ನು ಬದಲಾಯಿಸಿ ವೀರಪ್ಪ ಮೊಯ್ಲಿ ಅವರನ್ನು ಆಯ್ಕೆ ಮಾಡಿದ್ದರು. ಈಗ ಆ ಸಂದರ್ಭ ಬಂದಿದೆ ಅಂತ ನನಗೆ ಅನ್ನಿಸುತ್ತಿಲ್ಲ ಎಂದರು.
ತೀರ್ಮಾನಕ್ಕೆ 3&2 ಅಂತರ!
"ಅಧಿಕಾರ ಹಸ್ತಾಂತರ' ಬೇಕೇ? ಬೇಡವೇ ಎಂಬ ನಿರ್ಧಾರಕ್ಕೆ ಆರು ಜನರ ಅಭಿಪ್ರಾಯಗಳು ಮುಖ್ಯವಾಗುತ್ತದೆ ಎಂಬ ನಿಖರ ಮಾಹಿತಿ ಲಭ್ಯವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜತೆಗೆ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರದ್ದು. ಪ್ರಸ್ತುತ ಸಂದರ್ಭದಲ್ಲಿ 3&2ರ ಅಭಿಪ್ರಾಯ ವ್ಯತ್ಯಾಸವಿದ್ದು, ಮಲ್ಲಿಕಾರ್ಜುನ ರ್ಖಗೆಯವರ ತೀರ್ಮಾನ ಅಂತಿಮವಾಗಲಿದೆ. ರ್ಖಗೆಯವರು ಯಾವ ಅಭಿಪ್ರಾಯಕ್ಕೆ ದನಿಗೂಡಿಸುತ್ತಾರೆ ಎಂಬುದು ಮುಖ್ಯ.
ಸಿಎಂ ರೇಸ್ನಲ್ಲಿ ಇದ್ದೇನೆ ಎಂದ ಪರಂ
ನೀವು ಸಿಎಂ ರೇಸ್ನಲ್ಲಿ ಇದ್ದೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ನಾನು ಯಾವಾಗಲೂ ರೇಸ್ನಲ್ಲಿ ಇರುತ್ತೇನೆ. 2013ರಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೆವು. ನಾನೊಬ್ಬನೇ ಸರ್ಕಾರ ಅಧಿಕಾರಕ್ಕೆ ತಂದಿದ್ದು ಅಂತ ನಾನು ಎಲ್ಲೂ ಹೇಳಿಲ್ಲ. ಆ ಸಂದರ್ಭದಲ್ಲಿ ನಾನು ಪರಾಭವಗೊಂಡೆ. ಒಂದು ವೇಳೆ ನಾನು ಗೆದ್ದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ಒಂದು ಅವಕಾಶ ಕೊಡುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ ಎಂದರು.
ತೇನ್ಸಿಂಗ್ ವರಸೆ
ತೇನ್ಸಿಂಗ್ ಹಿಮಾಲಯ ಪರ್ವತ ಏರಿದಾಗ ಇಡೀ ಜಗತ್ತಿನ ಪತ್ರಿಕೆಗಳು ತೇನ್ಸಿಂಗ್ ಬಗ್ಗೆ ಸುದ್ದಿ ಬರೆದಿದ್ದವು. ಆದರೆ, ಅವರ ಸಹಾಯಕರಾಗಿ 14 ಇತರ ವ್ಯಕ್ತಿಗಳೂ ಪರ್ವತ ಏರಿದ್ದರು. ಅವರ ಹೆಸರು ಬರಲಿಲ್ಲ. ಹೀಗೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು, ಶಾಸಕರ ಸಹಿತ ಅನೇಕರು ಪ್ರತ್ಯಕ್ಷ, ಪರೋಕ್ಷವಾಗಿ ದುಡಿದಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.