ಚೆನ್ನೈ: ಚುನಾವಣೆಯಲ್ಲಿ ಪಕ್ಷದ ಸತತ ಸೋಲು, ನಾಯಕರ ಕಿತ್ತಾಟದಿಂದ ಬೇಸತ್ತು ದುಃಖದಿಂದ ಎಐಎಡಿಎಂಕೆ ಕಾರ್ಯಕರ್ತರೊಬ್ಬರು(AIADMK worker) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟು, ಬಳಿಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋಮವಾರ(ಜೂ. 01) ವರದಿಯಾಗಿದೆ.
ತಂಜಾವೂರು ಜಿಲ್ಲೆಯ ತಿರುಪ್ಪನಂದಲ್‌ನಲ್ಲಿ ಭಾನುವಾರ(ಮೇ 31) ಘಟನೆ ನಡೆದಿದ್ದು, ಎಐಎಡಿಎಂಕೆ ಕಾರ್ಯಕರ್ತ ಕೆಎಎಸ್ ಮಹೇಂದ್ರನ್(32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂಜಾವೂರು ಪೂರ್ವ ವ್ಯಾಪಾರಿ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಪಕ್ಷದ ಸತತ ಚುನಾವಣಾ ಹಿನ್ನಡೆಯಿಂದ ಬೇಸತ್ತಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಹೇಂದ್ರನ್, ವಿಡಿಯೋದಲ್ಲಿ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಸಾಲು-ಸಾಲು ಸೋಲು ಎಲ್ಲದರ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಎಐಎಡಿಎಂಕೆಯ ವಿವಿಧ ಬಣಗಳ ನಾಯಕರು ಮತ್ತು ಕಾರ್ಯಕರ್ತರಿಗೆ ಪಕ್ಷವನ್ನು ಬಲಪಡಿಸುವ ಸಲುವಾಗಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ನೇತೃತ್ವದಲ್ಲಿ ಒಂದಾಗುವಂತೆ ಮನವಿ ಮಾಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಬಳಿಕ ತಿರುಪ್ಪನಂದಲ್ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿರುಪ್ಪನಂದಲ್‌ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇನ್ನೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ಕಾರ್ಯಕರ್ತನ ಆತ್ಮಹತ್ಯೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಇಂದು ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಮತ್ತು ಅವರ ಕುಟುಂಬಕ್ಕೆ 55 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಭರವಸೆ ನೀಡಿದರು (ಏಜೆನ್ಸೀಸ್).