AIADMK  
ದೇಶ

ಟಿವಿಕೆ ವಿರುದ್ಧ ಕುದುರೆ ವ್ಯಾಪಾರದ ಆರೋಪ, ರಾಜ್ಯಪಾಲರ ಮೊರೆ ಹೋದ ಎಐಎಡಿಎಂಕೆ! | AIADMK

ಚೆನ್ನೈ: ಎಐಎಡಿಎಂಕೆಯ (AIADMK) ನಾಲ್ವರು ಶಾಸಕರ ರಾಜೀನಾಮೆ ಬೆನ್ನಲ್ಲೇ, ಆಡಳಿತಾರೂಢ ಟಿವಿಕೆ ಪಕ್ಷವು ನಡೆಸಿರುವ ಕುದುರೆ ವ್ಯಾಪಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋರಿ ಎಐಎಡಿಎಂಕೆ ಮುಖ್ಯ ಸಚೇತಕ ಅಗ್ರಿ ಎಸ್.ಎಸ್. ಕೃಷ್ಣಮೂರ್ತಿ ಶನಿವಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್​ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಎಐಎಡಿಎಂಕೆ ಶಾಸಕರುಗಳಾದ ಕೆ. ಮರಗತಂ ಕುಮಾರವೇಲ್ (ಮಧುರಾಂತಕಂ ವಿಧಾನಸಭಾ ಕ್ಷೇತ್ರ), ಎಸ್. ಜಯಕುಮಾರ್ (ಪೆರುಂದುರೈ), ಪಿ. ಸತ್ಯಭಾಮಾ (ಧಾರಾಪುರಂ) ಮತ್ತು ಇಸಾಕಿ ಸುಬಯ್ಯ (ಅಂಬಾಸಮುದ್ರಂ) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಟಿವಿಕೆ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಮೇ 13 ರಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಬಹುಮತ ಸಾಬೀತು ಪ್ರಕ್ರಿಯೆಯ ವೇಳೆ ಆಡಳಿತಾರೂಢ ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದ ಎಐಎಡಿಎಂಕೆಯ ಬಂಡಾಯ ಶಾಸಕರಲ್ಲಿ ಈ ನಾಲ್ವರು ಸೇರಿದ್ದರು.
ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಕೋಟ್ಯಂತರ ರೂಪಾಯಿಗಳ ಆಮಿಷ ಒಡ್ಡಲಾಗಿದ್ದು, ಈ ಇಡೀ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಹಣದ ವಹಿವಾಟು ನಡೆದಿದೆ ಎಂದು ಎಐಎಡಿಎಂಕೆ ರಾಜ್ಯಪಾಲರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಗಂಭೀರ ಆರೋಪ ಮಾಡಿದೆ. ಈ ಕುರಿತು ಕೇಂದ್ರೀಯ ತನಿಖಾ ದಳ (CBI) ಮೂಲಕ ಸಮಗ್ರ ತನಿಖೆ ನಡೆಸಲು ಒತ್ತಾಯಿಸಲಾಗಿದೆ ಎಂದು ಪಕ್ಷದ ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಜ್ಯಪಾಲರ ಭೇಟಿಯ ವೇಳೆ ಎಐಎಡಿಎಂಕೆ ಮುಖ್ಯ ಸಚೇತಕ ಅಗ್ರಿ ಎಸ್.ಎಸ್. ಕೃಷ್ಣಮೂರ್ತಿ ಅವರಿಗೆ ಎಐಎಡಿಎಂಕೆ ರಾಜ್ಯಸಭಾ ಸದಸ್ಯ ಎಂ. ಧನಪಾಲ್ ಸಾಥ್ ನೀಡಿದ್ದರು.

ಸಿಬಿಐ ತನಿಖೆಗೆ ಒತ್ತಾಯ, ಸ್ಪೀಕರ್ ಧಾವಂತಕ್ಕೆ ಅಸಮಾಧಾನ

ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಮೂರ್ತಿ, ಟಿವಿಕೆ ಪಕ್ಷ ನಡೆಸಿರುವ ಕುದುರೆ ವ್ಯಾಪಾರದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ನಮ್ಮ ಪಕ್ಷ ಒತ್ತಾಯಿಸಿದೆ. ನಮ್ಮ ದೂರಿನ ಆಧಾರದ ಮೇಲೆ ರಾಜ್ಯಪಾಲರು ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು. ಇದೇ ವೇಳೆ, ಎಐಎಡಿಎಂಕೆ ತೊರೆದು ಟಿವಿಕೆ ಸೇರಿದ ಶಾಸಕರ ರಾಜೀನಾಮೆ ಪತ್ರಗಳನ್ನು ವಿಧಾನಸಭಾ ಸ್ಪೀಕರ್ (ಸಭಾಪತಿ) ತುರ್ತಾಗಿ ಅಂಗೀಕರಿಸಿರುವ ಕ್ರಮದ ಬಗ್ಗೆಯೂ ಎಐಎಡಿಎಂಕೆ ಮುಖ್ಯ ಸಚೇತಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​).