ಎಐಎಡಿಎಂಕೆ ಶಾಸಕ ಇಸಕ್ಕಿ ಸುಬ್ಬಯ್ಯ ರಾಜೀನಾಮೆ
ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ಸೋಲಿನ ಬಳಿಕ ಇಬ್ಬಾಗದ ಹೊಸ್ತಿಲಿನಲ್ಲಿದ್ದ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ(AIADMK) ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ನಿನ್ನೆ ಮೂವರು ಮತ್ತು ಇಂದು ಮತ್ತೊಬ್ಬ ಶಾಸಕ ರಾಜೀನಾಮೆ ನೀಡಿದ್ದು, ಟಿವಿಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅಂಬಸಮುದ್ರಂ ಕ್ಷೇತ್ರದ ಎಐಎಡಿಎಂಕೆ ಶಾಸಕ ಇಸಕ್ಕಿ ಸುಬ್ಬಯ್ಯ ಅವರು ವಿಧಾನಸಭಾ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ರಾಜೀನಾಮೆ ಪತ್ರವನ್ನು ಟೈಪ್ ಮಾಡಿದ್ದರಿಂದ ನಿರಾಕರಿಸಿರುವ ಸ್ಪೀಕರ್ ಕೈಬರಹದಲ್ಲಿ ಬರೆದುಕೊಡುವಂತೆ ಸೂಚಿಸಿದ್ದಾರೆ.
ನಿನ್ನೆ ಮಧುರಾಂತಕಂ ಕ್ಷೇತ್ರದ ಶಾಸಕರ ಮರಗತಮ್ ಕುಮಾರವೇಲ್, ಪೆರುಂಡುರೈ ಕ್ಷೇತ್ರದ ಜಯಕುಮಾರ್ ಹಾಗೂ ಧಾರಾಪುರಂನಿಂದ ಗೆದ್ದ ಸತ್ಯಭಾಮ ಅವರು ರಾಜೀನಾಮೆ ಸಲ್ಲಿಸಿ ಸಚಿವ ಆಧವ್ ಅರ್ಜುನ್ ಅವರನ್ನು ಭೇಟಿಯಾಗಿದ್ದರು. ಇಂದು ಶಾಸಕ ಇಸಕ್ಕಿ ಸುಬ್ಬಯ್ಯ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಈ ನಾಲ್ವರು ಶಾಸಕರು ಮೇ 13ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಪಕ್ಷದ ವಿಪ್ ಅನ್ನು ಧಿಕ್ಕರಿಸಿ ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸಿದ 25 ಎಐಎಡಿಎಂಕೆ ಶಾಸಕರ ಗುಂಪಿನಲ್ಲಿದ್ದರು.
ಏತನ್ಮಧ್ಯೆ, ಷಣ್ಮುಗಂ-ವೇಲುಮಣಿ ಪಾಳಯದೊಂದಿಗೆ ಮೈತ್ರಿ ಮಾಡಿಕೊಂಡಿರುವ ಐದು ಎಐಎಡಿಎಂಕೆ ಶಾಸಕರು ಮತ್ತೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಬೆಂಬಲ ನೀಡಿದ್ದಾರೆ. ಇದರೊಂದಿಗೆ, ವಿಧಾನಸಭೆಯಲ್ಲಿ ಪಳನಿಸ್ವಾಮಿ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆ 27 ಕ್ಕೆ ಏರಿದೆ. ಮೂವರು ಶಾಸಕರ ರಾಜೀನಾಮೆ ಮತ್ತು ಐದು ಶಾಸಕರು ಪಳನಿಸ್ವಾಮಿ ಪಾಳಯಕ್ಕೆ ಮರಳಿದ್ದು, ಹಾಗೂ ಇಂದು ಮತ್ತೊಬ್ಬ ಶಾಸಕ ರಾಜೀನಾಮೆ ನೀಡುವುದರೊಂದಿಗೆ ಬಂಡಾಯ ಬಣದ ಬಲವು ಈಗ 25 ರಿಂದ 16 ಕ್ಕೆ ಇಳಿದಿದೆ.
ಇಂದು ಮತ್ತೊಂದು ಬೆಳವಣಿಗೆಯಲ್ಲಿ ಎಐಎಡಿಎಂಕೆಯ ಹಿರಿಯ ಶಾಸಕರಾದ ಅಗ್ರಿ ಎಸ್.ಎಸ್. ಕೃಷ್ಣಮೂರ್ತಿ, ಒ.ಎಸ್. ಮಣಿಯನ್, ಎನ್. ತಲವೈ ಸುಂದರಂ ಮತ್ತು ಐ.ಎಸ್. ಇನ್ಬದುರೈ ಅವರು ವಿಧಾನಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿ, ಎಐಎಡಿಎಂಕೆ ಶಾಸಕರು ಸಲ್ಲಿಸಿದ ರಾಜೀನಾಮೆಗಳನ್ನು ಅಂಗೀಕರಿಸದಂತೆ ಮನವಿ ಮಾಡಿದ್ದಾರೆ (ಏಜೆನ್ಸೀಸ್).