ಟಿವಿಕೆ ಪಕ್ಷದ ಎಐ ಬಳಕೆಯ ಪ್ರಚಾರ
- ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ
- ಟಿವಿಕೆ ಮುಖ್ಯಸ್ಥ ವಿಜಯ್ ಅವರ ಪಕ್ಷದ ಅಭ್ಯರ್ಥಿಗಳಿಂದ ಎಐ ಸದ್ಭಳಕೆ
- 'ಹೊಲೊಗ್ರಾಫಿಕ್ ಎಐ ಸಂವಹನ' ಬಳಕೆಗೆ ಹೆಚ್ಚು ಒತ್ತು
ಚೆನ್ನೈ: ಪಂಚರಾಜ್ಯ ಚುನಾವಣಾ ಕಣ ಬಲು ಜೋರಾಗಿದ್ದು, ತಮಿಳುನಾಡಿನಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಟಿವಿಕೆ ಪಕ್ಷದ ನಾಯಕ ವಿಜಯ್, ತಮಗೆ ಮತ್ತು ತಮ್ಮ ಪಕ್ಷಕ್ಕೆ ದೊಡ್ಡ ಮಟ್ಟದ ಬೆಂಬಲವನ್ನು ನೀಡುವಂತೆ ಈಗಾಗಲೇ ಜನರಲ್ಲಿ ವಿಶೇಷವಾಗಿ ಕೋರಿಕೆ ಇಟ್ಟಿದ್ದಾರೆ. ತಮ್ಮ ನಾಯಕನ ಕೆಲವು ಮಾತುಗಳನ್ನು ಅವರ ಅನುಪಸ್ಥಿತಿಯಲ್ಲೂ ಬಳಕೆ ಮಾಡಿಕೊಳ್ಳುತ್ತಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.
ಬದಲಾವಣೆ ಜಗದ ನಿಯಮ. ಈ ಮಾತನ್ನು ಇದೀಗ ರಾಜಕೀಯ ನಾಯಕರು ಕೂಡ ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಿರುವುದು ಗಮನಾರ್ಹ. ಕೇವಲ ಸಾಫ್ಟ್ವೇರ್ ಲೋಕಕ್ಕೆ ಭಾರೀ ಪ್ರಮಾಣದಲ್ಲಿ ಸೀಮಿತವಾಗಿರುವ ಎಐ ಟೆಕ್ನಾಲಜಿಯನ್ನು ಸದ್ಯ ತಮಿಳುನಾಡಿನ ನಾಯಕರು ಕೂಡ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ, ತಮಿಳುನಾಡಿನ ಟಿವಿಕೆ ಪಕ್ಷ ಮುಂಚೂಣಿಯಲ್ಲಿದೆ.
ರಾಜಕೀಯ, ಸಿನಿಮಾ ಕೆಲಸಗಳು ಮತ್ತು ವೈಯಕ್ತಿಕ ಕಾರಣಗಳಿಂದ ಸದ್ಯ ಸಖತ್ ಬಿಜಿಯಾಗಿರುವ ವಿಜಯ್, ಸಮಯದ ಕೊರತೆಯಿಂದಾಗಿ ಎಲ್ಲಾ ಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಮ್ಮ ನಾಯಕರ ಅನುಪಸ್ಥಿತಿಯಲ್ಲೂ ಅವರನ್ನು ಜನರ ಮುಂದೆ ನಿಲ್ಲಿಸಲು ಎಐ ಮೊರೆ ಹೋಗಿರುವ ಟಿವಿಕೆ ಅಭ್ಯರ್ಥಿಗಳು, ಹೊಲೊಗ್ರಾಫಿಕ್ ಎಐ ಸಂವಹನ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ತಮ್ಮ ಪ್ರಚಾರ ಕಾರ್ಯಗಳಲ್ಲಿ ಬಳಸಿಕೊಂಡಿದ್ದಾರೆ.
ಈ ತಂತ್ರಜ್ಞಾನದ ಮೂಲಕ, ವಿಜಯ್ ನೇರವಾಗಿ ಆಯಾ ಕ್ಷೇತ್ರಕ್ಕೆ ಬಂದು ಮತದಾರರೊಂದಿಗೆ ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ಇದಕ್ಕೆ ಸಂಬಂಧಿಸಿದ ಒಂದಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಡಿಜಿಟಲ್ ಯುಗದಲ್ಲಿ ಪ್ರಚಾರ ಶೈಲಿ ಹೇಗೆ ಬದಲಾಗುತ್ತಿದೆ ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ. ಇಷ್ಟೆಲ್ಲ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಟಿವಿಕೆ ಮತ್ತು ಇತರೆ ಪಕ್ಷಗಳು, ತಮಿಳುನಾಡು ಚುನಾವಣೆಯಲ್ಲಿ ಜನರಿಂದ ಯಾವ ಫಲಿತಾಂಶ ಪಡೆಯಲಿದೆ? ದಾಖಲೆಯ ಗೆಲುವು ಸಾಧಿಸಲಿದೆಯೇ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).