Ahmedabad Dosa Tragedy 
ದೇಶ

ಡೇಂಜರ್​ ರೆಡಿಮೇಡ್ ಇಡ್ಲಿ-ದೋಸೆ ಹಿಟ್ಟು?; ದೋಸೆ ತಿಂದು ಇಬ್ಬರು ಮಕ್ಕಳು ಸಾವು, ದಂಪತಿ ಜೀವನ್ಮರಣ ಹೋರಾಟ..Ahmedabad Dosa Tragedy

ಪ್ರಮುಖ ಮುಖ್ಯಾಂಶಗಳು

  • ರೆಡಿಮೇಡ್​ ಹಿಟ್ಟಿನಿಂದ ತಯಾರಿಸಿದ ದೋಸೆ ತಿಂದು ಕುಟುಂಬ ಅಸ್ವಸ್ಥ
  • ಇಬ್ಬರು ಶಿಶು ಮೃತ, ಪಾಲಕರ ಸ್ಥಿತಿ ಗಂಭೀರ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ
  • ಅಂಗಡಿಯಿಂದ ದೋಸೆ ಹಿಟ್ಟು ಕೊಂಡುಕೊಂಡವರು ಚೆನ್ನಾಗಿಯೇ ಇದ್ದಾರೆ ಎಂದ ಮಾಲೀಕ
ಅಹಮದಾಬಾದ್​: ರೆಡಿಮೇಡ್​ ಹಿಟ್ಟಿನಿಂದ (Readymade Dosa ಮಾಡಿದ ದೋಸೆ ತಿಂದು(Ahmedabad dosa deaths) ಇಬ್ಬರು ಮಕ್ಕಳು ಮೃತಪಟ್ಟಿದ್ದು, ದಂಪತಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಗುಜರಾತ್​ನಲ್ಲಿನ ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ  ಬೆಳಕಿಗೆ ಬಂದಿದೆ.
ಮೃತರನ್ನು 3 ತಿಂಗಳ ಮಗು ರಹಾ ಪ್ರಜಾಪತಿ, 4 ತಿಂಗಳು ಮಗು  ಮಿಶ್ರಿ ಪ್ರಜಾಪತಿ ಎಂದು ಗುರುತಿಸಲಾಗಿದೆ. ವಿಮಾ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದ ವಿಮಲ್ ಪ್ರಜಾಪತಿ ಮತ್ತು ಗೃಹಿಣಿ ಭಾವನಾ ಪ್ರಜಾಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಯಮನಾಗಿ ಬಂದ ರೆಡಿಮೇಡ್ ಹಿಟ್ಟು

ಇಡ್ಲಿ-ದೋಸೆ ಹಿಟ್ಟಿನಿಂದ ಮಾಡಿದ ಖಾದ್ಯ ತಿಂದ ನಂತರವೇ ಈ ಘಟನೆ ನಡೆದಿದೆ ಎನ್ನುವ ಆರೋಪವನ್ನು ದಂಪತಿಯ  ಕುಟುಂಬಸ್ಥರು ಮಾಡಿದ್ದರೂ ಸಹ, ಮೂರು ತಿಂಗಳ ಮಗು ಹಿಟ್ಟಿನಿಂದ ಮಾಡಿದ ಭಾರಿ ಆಹಾರವನ್ನು ಸೇವಿಸೋಕೆ ಆಗೋದಿಲ್ಲ. ಹೀಗಾಗಿ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
ಏಪ್ರಿಲ್ 1 ರ ಸಂಜೆ ವಿಮಲ್ ಚಂದಖೇಡಾದ ಐಒಸಿ ರಸ್ತೆಯಲ್ಲಿರುವ ಡೈರಿಯಿಂದ 3 ಕೆಜಿ ದೋಸೆ-ಇಡ್ಲಿ ಹಿಟ್ಟು ಖರೀದಿಸಿದ್ದರು. ಆ ರಾತ್ರಿ ಹಿಟ್ಟಿನಿಂದ ದೋಸೆ ಮಾಡಿ ತಿಂದರು.  ಮರುದಿನ ಬೆಳಿಗ್ಗೆ, ಎಲ್ಲರು ತೀವ್ರ ವಾಂತಿ ಮಾಡಿಕೊಂಡರು. ಅದಾಗಿ ಕೆಲವೇ ದಿನಕ್ಕೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಮೃತರ ಅಜ್ಜ ಹೇಳಿದ್ದೇನು

"ರೆಡಿಮೇಡ್​ ದೋಸೆ ಹಿಟ್ಟಿನಿಂದ ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು. ಒಂದು ಮಗುವಿಗೆ ತೀವ್ರ ಸೆಳೆತ ಉಂಟಾಗಿ ಮೃತಪಟ್ಟಿತು. ಮತ್ತೊಂದನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿದರು. ಆದರೆ, ಮನೆಗೆ ಬಂದ ನಂತರ ಮತ್ತೆ ಆರೋಗ್ಯ ಹದಗೆಟ್ಟಿತ್ತು. ಆದರೆ, ಮತ್ತೆ ಅದು ಬದುಕುಳಿಯಲಿಲ್ಲ. ಏಪ್ರಿಲ್ 4 ರಂದು  ಒಂದು ಮಗು ಮೃತಪಟ್ಟರೆ ಮತ್ತೊಂದು. ಏಪ್ರಿಲ್ 5 ರಂದು  ಹಿರಿಯ ಮಗು ಸಾವನ್ನಪ್ಪಿತ್ತು. ಆನಂತರ ಚಂದಖೇಡ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಹಿಟ್ಟಿನಿಂದ ತಯಾರಿಸಿದ ದೋಸೆ ತಿಂದಿದ್ದೇ ಇದಕ್ಕೆ ಕಾರಣ "ಎಂದು ಹೇಳಿದ್ದಾರೆ.

ಪೊಲೀಸರು ಏನಂದ್ರು?

"ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದ್ದು, ಹಲವು ಕೋನಗಳನ್ನು ಪರಿಶೀಲಿಸಲಾಗುತ್ತಿದೆ. ಮನೆಯಲ್ಲಿ  ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಹೀಗಾಗಿ ಏನಾಯಿತು ಎಂದು ತಿಳಿದುಕೊಳ್ಳಲು ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದೇವೆ" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಕೆ. ಮಕ್ವಾನಾ ಹೇಳಿದ್ದಾರೆ. 
"ಹಾಲುಣಿಸುವುದರಿಂದ ಮಗು ಮೃತಪಟ್ಟಿದೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ತಾಯಿ ಸ್ಥಿತಿ ಅಷ್ಟೇನು ಗಂಭೀರವಾಗಿಲ್ಲ. ಆದರೆ ಅವರನ್ನು ಐಸಿಯುನಲ್ಲಿ ನಿಗಾದಲ್ಲಿ ಇರಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಆಹಾರ ಮತ್ತು ಔಷಧ ಇಲಾಖೆಯ ಅಧಿಕಾರಿಗಳು ಡೈರಿ ಮತ್ತು ನಿವಾಸ ಎರಡರಿಂದಲೂ ಮಾದರಿಗಳನ್ನು ಸಂಗ್ರಹಿಸಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದರು. 

ಅಂಗಡಿ ಮಾಲೀಕನ ಸ್ಪಷ್ಟನೆ ಏನು?

"ದಿನಕ್ಕೆ ನಾವು 100 ರಿಂದ 125 ಕೆಜಿ ಹಿಟ್ಟು ಮಾರಾಟ ಮಾಡುತ್ತೇವೆ. ಬೇರೆ ಯಾವ ಗ್ರಾಹಕರು ಈ ಬಗ್ಗೆ ಕಂಪ್ಲೇಂಟ್ ಮಾಡಿಲ್ಲ. ತಿಂದವರು ಚೆನ್ನಾಗಿಯೇ ಇದ್ದಾರೆ.  ನಮ್ಮ ಕುಟುಂಬವೂ ಸಹ ಆ ಹಿಟ್ಟಲ್ಲೇ ದೋಸೆ ಮಾಡಿಕೊಂಡು ತಿಂದಿದ್ದು ನಮಗೇನು ಆಗಿಲ್ಲ. ಇದರಲ್ಲಿ ನಮ್ಮ ತಪ್ಪಿಲ್ಲ" ಎಂದು ಡೈರಿ ಮಾಲೀಕ ಕೇತನ್ ಪಟೇಲ್ ಹೇಳಿದ್ದಾರೆ.