ನವದೆಹಲಿ: ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ ಪ್ರತಿ ನಾಪತ್ತೆ ಪ್ರಕರಣದಲ್ಲಿ ತಕ್ಷಣ ಎಫ್ಐಆರ್ ದಾಖಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸವೋಚ್ಚ ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಎಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್.ಮಹದೇವನ್ ಅವರಿದ್ದ ಪೀಠ, ‘ವ್ಯಕ್ತಿ ಎಂಬ ಪದ ಮಕ್ಕಳನ್ನು ಮಾತ್ರ ಉಲ್ಲೇಖಿಸುತ್ತದೆ ಮತ್ತು ವಯಸ್ಕರನ್ನು ಒಳಗೊಂಡಿಲ್ಲ ಎಂದು ಕೆಲ ರಾಜ್ಯಗಳು ಭಾವಿಸಿರುವುದು ತಿಳಿದು ಆಘಾತವಾಗಿದೆ. ನಮ್ಮ ಹಿಂದಿನ ಆದೇಶದ ಭಾಷೆ ಸ್ಪಷ್ಟವಾಗಿದೆ. ವ್ಯಕ್ತಿ ಎಂದರೆ ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ ಪ್ರತಿ ವ್ಯಕ್ತಿ ಎಂದರ್ಥ. ಆದೇಶವನ್ನು ಅದರ ನೈಜ ಅರ್ಥ-ಉದ್ದೇಶದೊಂದಿಗೆ ಪಾಲಿಸಲು ವಿಫಲವಾದರೆ ಸಂಬಂಧಪಟ್ಟ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗುವುದು’ ಎಂದು ತಿಳಿಸಿದೆ. ಮೇ 22ರಂದು ನಾಪತ್ತೆಯಾದ ವ್ಯಕ್ತಿಗಳ ಪ್ರಕರಣಗಳಲ್ಲಿ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ದೇಶಾದ್ಯಂತ ಪೊಲೀಸ್ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
ವರ್ಷದೊಳಗೆ ವಿಚಾರಣೆ: ಐಸಿಸ್ನಂಥ ಭಯೋತ್ಪಾದಕ ಸಂಘಟನೆಗಳು ಸೈಬರ್ ಸ್ಪೇಸ್ ಬಳಸಿ ಯುವಕರನ್ನು ಮೂಲಭೂತವಾದಿಗಳನ್ನಾಗಿಸುತ್ತಿರುವ ಆರೋಪ ಸಂಬಂಧ ಎನ್ಐಎ ಪ್ರಕರಣದ ವಿಚಾರಣೆ ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಅಧಿಸೂಚಿತ ಕಾಯಿಲೆ: ಕ್ಯಾನ್ಸರ್ ರೋಗ ಪತ್ತೆ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ಒದಗಿಸಲು ಅದನ್ನು ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿಸುವಂತೆ 19 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಸೂಚಿಸಿದೆ. ಸಂಸದೀಯ ಸ್ಥಾಯಿ ಸಮಿತಿ ವರದಿ ಶಿಫಾರಸುಗಳ ಪ್ರಕಾರ 17 ರಾಜ್ಯಗಳು ಈಗಾಗಲೇ ಕ್ಯಾನ್ಸರ್ ಅಧಿಸೂಚಿತ ಕಾಯಿಲೆ ಎಂದು ಘೋಷಿಸಿವೆ.
ಸುಪ್ರೀಂ ನೋಟಿಸ್: ಟೋಕಿಯೊದ ರೆಂಕೋಜಿ ದೇಗುಲ ದಲ್ಲಿರುವ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಚಿತಾಭಸ್ಮ ಭಾರತಕ್ಕೆ ಮರಳಿ ತರಲು ನಿರ್ದೇಶನ ನೀಡುವಂತೆ ಕೋರಿ ಅವರ ಪುತ್ರಿ ಅನಿತಾ ಬಿ. ಫಾಫ್ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಜೆಐ ನೇತೃತ್ವದ ಪೀಠ ಸೂಚನೆ ನೀಡಿದೆ.