ಒಲಿಯಾಂಡರ್ ಎಲೆ ಅಗಿದು ಪತ್ನಿ ಸಾವಿಗೆ ಶರಣು: ಅತ್ತೆ ಮನೆಯಲ್ಲೇ ಆತ್ಮಹತ್ಯೆ ಮಾಡ್ಕೊಂಡ ಎಸ್ಐ, ಮಕ್ಕಳಿಬ್ಬರು ಅನಾಥ! Karimnagar SI
- ಪತ್ನಿ ಸಾವಿಗೆ ಶರಣಾದ ಕೇವಲ ನಾಲ್ಕು ದಿನಗಳಲ್ಲೇ ಸಬ್ ಇನ್ಸ್ಪೆಕ್ಟರ್ ಕೂಡ ನೇಣಿಗೆ ಶರಣು
- ಒಲಿಯಾಂಡರ್ ಹೂವಿನ ಎಲೆ ಮತ್ತು ಬೀಜಗಳನ್ನು ಅಗಿದು ಎಸ್ಐ ಪತ್ನಿ ದುರ್ಮರಣ
- ಪತ್ನಿಯ ಸಾವಿನ ನೋವನ್ನು ತಾಳಲಾರದೇ ಅತ್ತೆ ಮನೆಯಲ್ಲೇ ನೇಣಿಗೆ ಶರಣಾದ ಎಸ್ಐ
- ಅಪ್ಪ-ಅಮ್ಮನ ಸಾವಿನಿಂದಾಗಿ ಅನಾಥರಾದ ಇಬ್ಬರು ಗಂಡು ಮಕ್ಕಳು
Karimnagar SI : ತನ್ನ ಪತ್ನಿ ಸಾವಿಗೆ ಶರಣಾದ ಕೇವಲ ನಾಲ್ಕು ದಿನಗಳಲ್ಲೇ ತೆಲಂಗಾಣದ ಕರೀಂನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೂಡ ನೇಣು ಬಿಗಿದುಕೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆ ಕರೀಂನಗರ ಜಿಲ್ಲೆಯ ಎಲಂತಕುಂಟ ಮಂಡಲದ ಸೀತಂಪೇಟೆ ಗ್ರಾಮದಲ್ಲಿ ಇಂದು (ಮಾರ್ಚ್ 21) ನಡೆದಿದೆ.
ಮೃತರನ್ನು ಎಸ್ಐ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಚಂದ್ರಶೇಖರ್ ಅವರ ಪತ್ನಿ ದಿವ್ಯಾ, ನಾಲ್ಕು ದಿನಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿವ್ಯಾ, ವಿಷಕಾರಿ ಒಲಿಯಾಂಡರ್ ಹೂವಿನ ಎಲೆ ಮತ್ತು ಬೀಜಗಳನ್ನು ಅಗಿದು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಕರೀಂನಗರಕ್ಕೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಪಡೆಯುವಾಗ ಫಲಕಾರಿಯಾಗದೇ ನಿಧನರಾದರು.
ವಿಪರೀತ ಹೊಟ್ಟೆ ನೋವನ್ನು ತಾಳಲಾರದೇ ದಿವ್ಯಾ ವಿಷ ಸೇವಿಸಿದರು ಎಂದು ಚಂದ್ರಶೇಖರ್ ಹೇಳಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಗಂಭೀರ ಆರೋಪ ಮಾಡಿರುವ ಸಂಬಂಧಿಕರು, ದಿವ್ಯಾ ಅವರ ಮೃತದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಮಧ್ಯೆ ದಿವ್ಯಾ ಅವರ ಅಂತ್ಯಕ್ರಿಯೆ ನೇರವೇರಿಸಲು ಸೀತಂಪೇಟ ಗ್ರಾಮದಲ್ಲಿರುವ ಅತ್ತೆ ಮನೆಗೆ ಚಂದ್ರಶೇಖರ್ ಆಗಮಿಸಿದ್ದರು. ಈ ವೇಳೆ ದಿವ್ಯಾ ಅವರ ಸಾವಿಗೆ ಚಂದ್ರಶೇಖರ್ ಕಾರಣ ಎಂಬ ಆಕ್ರೋಶದಲ್ಲಿ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದರು. ಐದು ದಿನಗಳ ಕಾಲ ವಿಧಿವಿಧಾನಗಳನ್ನು ನೆರವೇರಿಸಬೇಕಿದ್ದ ಕಾರಣ, ಚಂದ್ರಶೇಖರ್ ಅವರು ತಮ್ಮ ಅತ್ತೆ ಮನೆಯಲ್ಲೇ ಉಳಿದಿದ್ದರು. ಪತ್ನಿ ದಿವ್ಯಾರ ಸಾವನ್ನು ಸಹಿಸಲಾಗದ ಚಂದ್ರಶೇಖರ್, ಇಂದು ಕ್ರೂರ ನಿರ್ಧಾರ ತೆಗೆದುಕೊಂಡರು. ಅತ್ತೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಪರಿಣಾಮವಾಗಿ ದಂಪತಿಯ ಮಕ್ಕಳು ಅನಾಥರಾಗಿದ್ದಾರೆ
ಅಂದಹಾಗೆ, ಕರೀಂನಗರ ಜಿಲ್ಲೆಯ ಇಲ್ಲಂತಕುಂಟ ಮಂಡಲದ ಸೀತಾಂಪೇಟೆಯ ದಿವ್ಯಾ (30) 2016 ರಲ್ಲಿ ಚಂದ್ರಶೇಖರ್ ಅವರನ್ನು ವಿವಾಹವಾದರು. ಅವರು ಪ್ರಸ್ತುತ ಕರೀಂನಗರದ ಹನುಮಾನ್ನಗರದಲ್ಲಿ ವಾಸಿಸುತ್ತಿದ್ದರು. ಚಂದ್ರಶೇಖರ್ ಅವರು ಟೂ ಟೌನ್‌ನಲ್ಲಿ ಎಸ್‌ಎಸ್ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಪ್ಪ-ಅಮ್ಮ ನಿಧನರಾದ ಕಾರಣ, ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಇದೀಗ ಮಕ್ಕಳನ್ನು ನೋಡಿವರು ಕಂಬನಿ ಮಿಡಿಯುತ್ತಿದ್ದಾರೆ.
ಒಲಿಯಾಂಡರ್ ಎಷ್ಟು ಡೇಂಜರ್?
ಒಲಿಯಾಂಡರ್ (ಕಣಗಿಲೆ) ಸಸ್ಯವು ಅತ್ಯಂತ ವಿಷಕಾರಿಯಾಗಿದ್ದು, ಇದರ ಎಲೆ, ಹೂವು, ಕಾಂಡ ಮತ್ತು ಬೇರು ಸೇರಿದಂತೆ ಪ್ರತಿಯೊಂದು ಭಾಗವೂ ಕಾರ್ಡಿಯಾಕ್ ಗ್ಲೈಕೋಸೈಡ್‌ಗಳೆಂಬ (oleandrin) ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುತ್ತದೆ. ಒಂದು ವೇಳೆ ಇದನ್ನು ಸೇವಿಸಿದರೆ ಹೃದಯ ಬಡಿತದಲ್ಲಿ ಏರುಪೇರು, ತೀವ್ರ ರಕ್ತದೊತ್ತಡ ಕುಸಿತ, ವಾಂತಿ, ತಲೆತಿರುಗುವಿಕೆ ಮತ್ತು ದೃಷ್ಟಿ ಮಂದವಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೀವ್ರ ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು. ಕೇವಲ ಒಂದು ಎಲೆಯನ್ನು ಸೇವಿಸುವುದು ಕೂಡ ಮಗು ಅಥವಾ ಸಾಕುಪ್ರಾಣಿಗಳಿಗೆ ಪ್ರಾಣಾಪಾಯ ತರಬಲ್ಲದು. ಅಷ್ಟೇ ಅಲ್ಲದೆ, ಈ ಗಿಡವನ್ನು ಸುಟ್ಟಾಗ ಬರುವ ಹೊಗೆಯನ್ನು ಉಸಿರಾಡುವುದು ಅಥವಾ ಇದರ ಹಾಲಿನಂತಹ ರಸ ಚರ್ಮಕ್ಕೆ ತಗುಲಿದರೂ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ, (ಏಜೆನ್ಸೀಸ್).