Noida dowry death case 
ದೇಶ

ತ್ವಿಶಾ ಕೇಸ್ ನಂತರ ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮತ್ತೊಬ್ಬ ಗೃಹಿಣಿ ಆತ್ಮಹತ್ಯೆ; ಪತಿ ಕುಟುಂಬಸ್ಥರು ಅರೆಸ್ಟ್..Dowry

ಪ್ರಮುಖ ಮುಖ್ಯಾಂಶಗಳು

  • ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ನೊಯ್ಡಾ ಮಹಿಳೆ.
  • ಮದುವೆಯಾಗಿ ಒಂದೂವರೆ ವರ್ಷದೊಳಗೆ 24 ವರ್ಷದ ಮಹಿಳೆ ಆತ್ಮಹತ್ಯೆ.
  • ಕಳೆದ ಕೆಲವು ದಿನದ ಹಿಂದೆ ತ್ವಿಶಾ ಶರ್ಮಾ ಎಂಬಾಕೆ ಇದೇ ಕಾರಣಕ್ಕೆ ಆತ್ಯಮತ್ಯೆ ಮಾಡಿಕೊಂಡಿದ್ದರು.
 Noida dowry death case: ಇತ್ತೀಚೆಗೆ ನೋಯ್ಡಾದಲ್ಲಿ  ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ತ್ವಿಶಾ ಶರ್ಮಾ ಎಂಬುವವರು ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. 24 ವರ್ಷದ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ ತಾಳಲಾರದೆ 24 ವರ್ಷದ ದೀಪಿಕಾ ಎಂಬ ಹೆಸರಿನ ವಿವಾಹಿತ ಮಹಿಳೆಯೊಬ್ಬರು ತಮ್ಮ ಮನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೀಪಿಕಾ ಅವರು ಬಾದಲಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಡಿ ಖೇರಾ ಗ್ರಾಮದ ನಿವಾಸಿಯಾಗಿದ್ದು, ಇಲ್ಲಿನ ನಿವಾಸಿಯಾದ ಹೃತಿಕ್ ಎಂಬಾತನೊಂದಿಗೆ ದೀಪಿಕಾ ಅವರ ವಿವಾಹ ನಡೆದಿತ್ತು. ಅದಾದ ನಂತರ ಒಂದೂವರೆ ವರ್ಷದಿಂದ  ಗ್ರೇಟರ್ ನೋಯ್ಡಾದ ಎಕೋಟೆಕ್-III ವ್ಯಾಪ್ತಿಯ ಜಲಪುರ ಗ್ರಾಮದಲ್ಲಿದ್ದರು. 
ಮದುವೆಗೆ ಒಂದು ಕೋಟಿ ಖರ್ಚು ಮಾಡಲಾಗಿದೆ. ಇಷ್ಟಾದರೂ ಸಹ ವರದಕ್ಷಿಣೆಗೆ ಪೀಡಿಸುತ್ತಿದ್ದರು. ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 
ಭಾನುವಾರ ರಾತ್ರಿ ದೀಪಿಕಾ ಅವರ ಅತ್ತೆ-ಮಾವ ಹಾಗೂ ಪತಿ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ನೊಂದಿದ್ದ ಆಕೆ ಭಾನುವಾರ ರಾತ್ರಿ ಮನೆಯ ತಾರಸಿ ಮೇಲಿಂದ ಕೆಳಕ್ಕೆ ಬಿದ್ದು ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ರಕ್ತದ ಮಡುವಿನಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಅವರು ಬದುಕುಳಿದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. 

ದೀಪಿಕಾ ಪತಿ, ಅತ್ತೆ-ಮಾವ ಅರೆಸ್ಟ್

ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ, ಆಕೆಯ ಪತಿ ಹಾಗೂ ಪೋಷಕರು ಹಿಂಸಿಸಿದ್ದಾರೆ ಎಂದು ಪೊಲೀಸ್​ ಠಾಣೆಗೆ ದೀಪಿಕಾರ ಪೋಷಕರು ದೂರು ಕೊಟ್ಟಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು ಬಾದಲಪುರ ಮತ್ತು ಎಕೋಟೆಕ್-III ವ್ಯಾಪ್ತಿಯ  ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಮೃತಳ ಪತಿ ಹೃತಿಕ್ ಮತ್ತು ಆಕೆಯ ಮಾವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯಾರಿದು ತ್ವಿಶಾ?

ನೋಯ್ಡಾದಲ್ಲೇ ಕಳೆದ ಕೆಲವು ದಿನದ ಹಿಂದೆ ಸಾಫ್ಟ್​​ವೇರ್ ಎಂಜಿನಿಯರ್​​ ತ್ವಿಶಾ ಶರ್ಮಾ ಎಂಬುವವರು ನೇಣಿಗೆ ಕೊರಳೊಡ್ಡಿದ್ದರು. ವಕೀಲ ಪತಿಯಿಂದ ನಿರಂತರ ಮಾನಸಿಕ ಮತ್ತು ದೈಹಿಕರ ಕಿರುಕುಳಕ್ಕೆ ಒಳಗಾಗಿ, ಮದುವೆಯಾದ ಐದೇ ತಿಂಗಳಿಗೆ ಮೃತಪಟ್ಟಿದ್ದ ಬಗ್ಗೆ ದೂರು ದಾಖಲಾಗಿತ್ತು. ತ್ವಿಶಾ ಪೋಷಕರು ಸಿಎಂ ಮನೆಯ ಮುಂದೆ ಮರಣೋತ್ತರ ಪರೀಕ್ಷೆಯ ವಿಚಾರವಾಗಿ ಪ್ರತಿಭಟನೆ ನಡೆಸಿದ್ದರು. ಆ ಬೆನ್ನಲ್ಲೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿರುವುದು  ರಾಜ್ಯದಲ್ಲಿ ಮಹಿಳೆಯರಿಗೆ ಕಾಡುತ್ತಿರುವ ಅಸುರಕ್ಷತೆ ಬಗ್ಗೆ ಎದ್ದು ಕಾಣುತ್ತಿದೆ, (ಏಜೆನ್ಸೀಸ್).