- ತಳಪತಿ ವಿಜಯ್ ರ‍್ಯಾಲಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಯುವಕ
- ಸಾವಿಗೀಡಾದ ವ್ಯಕ್ತಿ ಮಹಾರಾಷ್ಟ್ರ ಮೂಲದ ಸೂರಜ್ (37) ಎಂದು ಪತ್ತೆ
- ಕರೂರು ಕಾಲ್ತುಳಿತದ ನಂತರ ಮತ್ತೆ ವಿಜಯ್ ರ‍್ಯಾಲಿಯಲ್ಲಿ ಸಾವು
ಸೇಲಂ: ಶುಕ್ರವಾರ (ಫೆ.13) ತಮಿಳುನಾಡಿನ ಸೇಲಂನಲ್ಲಿ ನಡೆದ ನಟ-ರಾಜಕಾರಣಿ ತಳಪತಿ ವಿಜಯ್ (Thalapathy Vijay) ಅವರ ರ‍್ಯಾಲಿಯಲ್ಲಿ ಮತ್ತೊಮ್ಮೆ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ವಿಜಯ್ ಅವರ ಕರೂರ್ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 40 ಜನರು ಸಾವನ್ನಪ್ಪಿದ್ದರು.
ಇಂದು ಸೇಲಂನಲ್ಲಿ ನಡೆದ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ರಾಜಕೀಯ ಸಭೆಯ ಸಮಯದಲ್ಲಿ ಮಹಾರಾಷ್ಟ್ರದ 37 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಎಂದು ಸೇಲಂ ಪೊಲೀಸರು ಮಾಧ್ಯಮ ಸಂಸ್ಥರಗಳಿಗೆ ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ಸೂರಜ್ (37) ಎಂದು ಗುರುತಿಸಲಾಗಿದೆ. ಅವರು ಸೇಲಂನ ಸೆವ್ವೈಪೆಟ್ಟೈ ಪ್ರದೇಶದಲ್ಲಿ ಅಲ್ಲಿ ಬೆಳ್ಳಿ ಸಂಬಂಧಿತ ಕಾರ್ಮಿಕ ಕೆಲಸದಲ್ಲಿ ತೊಡಗಿದ್ದರು. ಅವರು ವಿವಾಹಿತರಾಗಿದ್ದು ಪತ್ನಿ ಹಾಗೂ ಒಂದು ಮಗುವಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.
ಮಾಹಿತಿಗಳ ಪ್ರಕಾರ, ಸೂರಜ್, ವಿಜಯ್ ಅವರ ರ‍್ಯಾಲಿಯಲ್ಲಿ ವೀಕ್ಷಕರಾಗಿ ಪಾಲ್ಗೊಂಡಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ವೈದ್ಯಕೀಯ ಸಹಾಯಕ್ಕಾಗಿ ಕರೆದೊಯ್ಯಲಾಯಿತು, ಆದರೆ ಹೃದಯಾಘಾತದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ,(ಏಜನ್ಸೀಸ್).