ದಳಪತಿ ನಟ ವಿಜಯ್​  
ದೇಶ

ದಾಂಪತ್ಯ, ಸಿನಿಮಾ, ರಾಜಕೀಯ... ಆ ಒಂದು ಘಟನೆ ಬೆನ್ನಲ್ಲೇ ದಳಪತಿ ವಿಜಯ್​ ಹೆಗಲೇರಿತು ಸಾಲು ಸಾಲು ಸಮಸ್ಯೆ! | Thalapathy Vijay

ಪ್ರಮುಖ ಮುಖ್ಯಾಂಶಗಳು

  • ಟಿವಿಕೆ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ಸೂಪರ್​ ಸ್ಟಾರ್​ ದಳಪತಿ ವಿಜಯ್
  • ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಸೇರಿದಾಗಿನಿಂದ ಒಂದಲ್ಲ ಒಂದು ಬಗೆಹರಿಯದ ಸಮಸ್ಯೆ
  • ಅದೊಂದು ಘಟನೆಯಿಂದ ಶುರುವಾದ ಸಮಸ್ಯೆ ಇಂದಿಗೂ ಮುಗಿದಿಲ್ಲ
Thalapathy Vijay: ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ಸೂಪರ್​ ಸ್ಟಾರ್​ ದಳಪತಿ ವಿಜಯ್​ ದಾಂಪತ್ಯದಲ್ಲಿ ದೊಡ್ಡ ಬಿರುಕು ಮೂಡಿದ್ದು, ನಟನ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ತಮಿಳುನಾಡು ರಾಜಕೀಯ ಮತ್ತು ಸಿನಿ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಟಿ ತ್ರಿಷಾ ಕೃಷ್ಣನ್​ ಹೆಸರು ಕೂಡ ಕೇಳಿಬಂದಿದೆ. ಇದೆಲ್ಲದರ ನಡುವೆಯೂ ಚುನಾವಣಾ ಕಣದಲ್ಲಿರುವ ವಿಜಯ್​ಗೆ ಇದೀಗ ತಮ್ಮ ಬಹುನಿರೀಕ್ಷಿತ ಚಿತ್ರದ ದೃಶ್ಯಗಳು ಲೀಕ್ ಆಗಿರುವುದು ಭಾರೀ ಬೇಸರ ತಂದೊಡ್ಡಿದೆ.
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸೂಪರ್​ಹಿಟ್​ ಸಿನಿಮಾಗಳನ್ನು ಕೊಟ್ಟಿರುವ ದಳಪತಿ, ಇಂದು ತಾವು ಅಭಿನಯಿಸುವ ಒಂದೇ ಒಂದು ಚಿತ್ರಕ್ಕೆ ಬರೋಬ್ಬರಿ 250 ಕೋಟಿ ರೂ. ಮೊತ್ತದ ಸಂಭಾವನೆ ಪಡೆಯುವ ರೇಂಜಿಗಿದ್ದಾರೆ. ಹೀಗಿರುವಾಗಲೇ, ತಮ್ಮ ದಿಕ್ಕನ್ನು ರಾಜಕೀಯದತ್ತ ತಿರುಗಿಸಿರುವ ದಳಪತಿ, 'ಜನನಾಯಗನ್'​ ಬಳಿಕ ಇನ್ಯಾವುದೇ ಚಿತ್ರ ಮಾಡುವುದಿಲ್ಲ, ಪರಿಪೂರ್ಣವಾಗಿ ರಾಜಕಾರಣಿಯಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು. ಇದಾದ ಬಳಿಕ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕಿಳಿದ ದಳಪತಿಗೆ, ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದೊಡ್ಡ ಹೊಡೆತ ನೀಡಿದೆ. ಇದೊಂದು ದುರ್ಘಟನೆಯಿಂದಲೇ ಶುರುವಾಗಿದ್ದು ವಿಜಯ್​ಗೆ ಸಂಕಷ್ಟಗಳ ಸರಮಾಲೆ. 
40 ಮಂದಿ ಕಾಲ್ತುಳಿತಕ್ಕೆ ಬಲಿ
ಕಳೆದ ವರ್ಷ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ಆಯೋಜಿಸಿದ್ದ ಟಿವಿಕೆ ರಾಜಕೀಯ ರ್ಯಾಲಿಯಲ್ಲಿ ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ಜನಸಾಗರದ ಮಧ್ಯೆ ಸೇರಿದ್ದ ಅಭಿಮಾನಿಗಳಲ್ಲಿ 40ಕ್ಕೂ ಅಧಿಕ ಮಂದಿ ಕಾಲ್ತುಳಿತ ದುರಂತಕ್ಕೆ ಸಿಲುಕಿ ಸಾವನ್ನಪ್ಪಿದರು. ಈ ದುರ್ಘಟನೆ ಸಂಭವಿಸಿದ ದಿನದಿಂದಲೂ ವಿಜಯ್​ಗೆ ಒಂದಲ್ಲ, ಒಂದು ಸಮಸ್ಯೆಗಳು ಕಾಡಲಾರಂಭಿಸಿವೆ. 

1. ರಾಜಕೀಯ ಸಂಕಷ್ಟ

ಟಿವಿಕೆ ಪಕ್ಷವನ್ನು ಘೋಷಿಸಿ, ಅಭಿಮಾನಿಗಳ ಎದುರು ಜನ ನಾಯಕನಾಗಿ ನಿಲ್ಲಲು ಸಜ್ಜಾದ ವಿಜಯ್​, ಕರೂರಿನಲ್ಲಿ ಚುನಾವಣೆಯ ಸಲುವಾಗಿ ಬೃಹತ್​ ರ್ಯಾಲಿಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದರು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ವಿಜಯ್ ಆಗಮಿಸಿದ್ದೇ ತಡ, ದೊಡ್ಡ ಕಾಲ್ತುಳಿತ ಸಂಭವಿಸಿತು. ಈ ದುರಂತದಲ್ಲಿ ಬರೋಬ್ಬರಿ 41 ಅಭಿಮಾನಿಗಳು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡರು. ಅಲ್ಲಿಂದ ಪ್ರತಿಪಕ್ಷಗಳು ವಿಜಯ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೇರಿತು. ಇದರೊಟ್ಟಿಗೆ ನಟನಿಗೆ ಕಾನೂನು ಸಂಕಷ್ಟ ಕೂಡ ಎದುರಾಯಿತು. 

2. ದಾಂಪತ್ಯದಲ್ಲಿ ಬಿರುಕು

2021ರಿಂದ ಪತಿಯಿಂದ ದೂರವಿರುವ ವಿಜಯ್ ಪತ್ನಿ ಸಂಗೀತಾ, ಲಂಡನ್​ನಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ, ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​​ ಅರ್ಜಿ ಸಲ್ಲಿಸಿದ ಅವರು, ವಿಜಯ್​ ಆಕೆ (ಹೆಸರು ಉಲ್ಲೇಖಿಸಿಲ್ಲ) ಜೊತೆ ಅನೈತಿಕ ಸಂಬಂಧ ಹೊಂದಿರುವ ವಿಷಯ ನನಗೆ ಹಾಗೂ ನನ್ನ ಮಕ್ಕಳಿಗೆ ತೀರ ಘಾಸಿ ಮಾಡಿದೆ. ಇದು ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ, ಅವರಿಬ್ಬರು ಫಾರಿನ್​ ಟ್ರಿಪ್​ಗಳಿಗೆ ಹೋದ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಾಕಿಕೊಂಡಿರುವುದು ತುಂಬ ನೋವುಂಟು ಮಾಡಿದೆ ಎಂದು ಹೇಳುವ ಮೂಲಕ ಪತಿಯಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. 

3. ತ್ರಿಷಾ ಜೊತೆಗಿನ ಫೋಟೋ

ಕಳೆದ ಹಲವು ವರ್ಷಗಳಿಂದ ನಟಿ ತ್ರಿಷಾ ಕೃಷ್ಣನ್ ಜೊತೆ ವಿಜಯ್ ಅವರ ಹೆಸರು ಆಗಾಗ್ಗೆ ಕೇಳಿಬರುತ್ತಲೇ ಇತ್ತು. ಇದು ಕಾಲಿವುಡ್​ ಅಂಗಳದಲ್ಲಿ ದೊಡ್ಡ ವದಂತಿಯಾಗಿ ಹರಿದಾಡುತ್ತಿತ್ತು. ಆದರೆ, ಇದಕ್ಕೆ ಯಾವುದೇ ರೀತಿಯಲ್ಲೂ ವಿಜಯ್ ಅಥವಾ ತ್ರಿಷಾ ಆಗಲಿ, ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ, ವಿಜಯ್ ಡಿವೋರ್ಸ್​ ಸುದ್ದಿ ಹೊರಬಿದ್ದಾಗಿನಿಂದಲೂ ನಟಿಯ ಹೆಸರು ಮತ್ತೆ ಜೋರಾಗಿ ಸದ್ದು ಮಾಡಲಾರಂಭಿಸಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದ್ದು, ಇತ್ತೀಚಿಗೆ ಅವರಿಬ್ಬರು ಮದುವೆ ಸಮಾರಂಭಕ್ಕೆ ಭೇಟಿ ಕೊಟ್ಟ ಕ್ಷಣ. ಈ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 

4. 'ಜನ ನಾಯಗನ್'​ ದೃಶ್ಯಗಳು ಲೀಕ್​

ತಮಿಳು ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ವಿಜಯ್​ ನಟನೆಯ ಕೊನೆಯ ಸಿನಿಮಾ ಜನನಾಯಗನ್.​ ಸದ್ಯ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರಣ, ವಿಜಯ್​ ಸದ್ಯ ತಮ್ಮ ಬಹುಪಾಲು ಸಮಯವನ್ನು ಜನ ಸೇವೆಗೆ ಮೀಸಲಿಟ್ಟಿದ್ದಾರೆ. ಈ ಮಧ್ಯೆ, ಕಡೆಯ ಚಿತ್ರವನ್ನು ವಿಜಯ್​ ಮುಗಿಸಿಕೊಟ್ಟಿದ್ದೇ ಆದರೂ, ಸೆನ್ಸಾರ್​ ಮಂಡಳಿಯಿಂದ ಉಂಟಾದ  ಕಾನೂನಿನ ಸಂಕಷ್ಟ ಇದೀಗ ಚಿತ್ರದ ರಿಲೀಸ್​ ಯಾವಾಗ ಎಂಬ ಸ್ಪಷ್ಟತೆಯೇ ಇಲ್ಲದಂತೆ ಮಾಡಿಟ್ಟಿದೆ. ಮತ್ತೊಂದೆಡೆ, ಚಿತ್ರದ ಬಹುಮುಖ್ಯ ದೃಶ್ಯಗಳು ಜಾಲತಾಣಗಳಲ್ಲಿ ಲೀಕ್​ ಆಗಿರುವುದು ಚಿತ್ರತಂಡಕ್ಕೆ ಮುಂದೇನು ಮಾಡಬೇಕೋ ತಿಳಿಯದು ಎನ್ನುವ ಪಜೀತಿಗೆ ತಂದಿಟ್ಟಿದೆ. 
 ​