- ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿಕ RR ತಂಡ ಸೇಲ್
- ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡ ಹರ್ಷ ಗೋಯೆಂಕಾ
ಜೈಪುರ: ಐಪಿಎಲ್ 2026 ಆವೃತ್ತಿ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮಾರಾಟಕ್ಕೆ ಸಿದ್ಧವಿದೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ರಾಜಸ್ಥಾನ್ ರಾಯಲ್ಸ್(RR) ತಂಡ ಮಾರಾಟಕ್ಕಿದೆ ಎಂದು ಶುಕ್ರವಾರ ವರದಿಯಾಗಿದೆ.
ಹೌದು, ಲಕ್ನೋ ಸೂಪರ್ ಜೆಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಹಿರಿಯ ಸಹೋದರ ಹರ್ಷ ಗೋಯೆಂಕಾ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಈ ಬಾರೀ ಒಂದಲ್ಲ ಎರಡು ತಂಡಗಳು ಮಾರಾಟಕ್ಕೆ ಸಿದ್ದವಿದೆ ಎಂದಿದ್ದಾರೆ. ಇದೀಗ, ಆರ್‌ಆರ್ ತಂಡ ಕೂಡ ಹೊಸ ಮಾಲೀಕರ ಹುಡುಕಾಟದಲ್ಲಿದೆ.
ಹರ್ಷ ಗೋಯೆಂಕಾ ಹೇಳಿದ್ದೇನು..?
"ಐಪಿಎಲ್‌ನಲ್ಲಿ ಒಂದಲ್ಲ, ಎರಡು ತಂಡಗಳು ಮಾರಾಟಕ್ಕೆ ಸಿದ್ಧವಾಗಿವೆ ಎಂದು ನಾನು ಕೇಳಿದ್ದೇನೆ. ಆರ್‌ಸಿಬಿ ಮತ್ತು ಆರ್‌ಆರ್. ಮೌಲ್ಯಮಾಪನವನ್ನು ಶ್ರೀಮಂತ ಮಾಲೀಕರು ಲಾಭ ಮಾಡಿಕೊಳ್ಳಲು ಬಯಸಿದ್ದಾರೆ ಅನ್ನೋದನ್ನ ಇದು ಸ್ಪಷ್ಟವಾಗಿ ತೋರಿಸುತ್ತದೆ.ಎರಡು ತಂಡಗಳ4/5 ಸಂಭಾವ್ಯ ಖರೀದಿದಾರಾರು ಯಾರು? ಪುಣೆ, ಅಹಮದಾಬಾದ್, ಮುಂಬೈ, ಬೆಂಗಳೂರು ಅಥವಾ ಯುಎಸ್‌ಎಯಿಂದ ಬಂದವರಾಗಿರುತ್ತಾರೆಯೇ?" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಸದ್ಯಕ್ಕೆ RR ಒಡೆತನ ಯಾರ ಬಳಿಯಿದೆ?
ಜೈಪುರ ಮೂಲದ ಫ್ರ್ಯಾಂಚೈಸ್ ಅನ್ನು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ (ಎಮರ್ಜಿಂಗ್ ಮೀಡಿಯಾ ಸ್ಪೋರ್ಟಿಂಗ್ ಹೋಲ್ಡಿಂಗ್ಸ್ ಲಿಮಿಟೆಡ್) ಒಡೆತನದಲ್ಲಿದೆ ಎಂದು 2024 ರಲ್ಲಿ ವರದಿಯಾಗಿದೆ. ಈ ಗ್ರೂಪ್ 65% ಪಾಲನ್ನು ಹೊಂದಿದೆ. ಪ್ರಮುಖ ಪಾಲುದಾರರಲ್ಲಿ ಲಾಚ್ಲಾನ್ ಮುರ್ಡೋಕ್ ಮತ್ತು ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್‌ನರ್ಸ್ ಸೇರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
16000 ಕೋಟಿ ರೂ.ಗೆ RCB ಸೇಲ್!
ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರ ಮತ್ತು ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ ಫ್ರಾಂಚೈಸಿ ಭಾರಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಈ ಫ್ರಾಂಚೈಸಿಯ ಮೌಲ್ಯ ಸುಮಾರು ಎರಡು ಬಿಲಿಯನ್ ಯುಎಸ್ ಡಾಲರ್‌ಗಳು (ಸುಮಾರು 16000 ಕೋಟಿ ರೂಪಾಯಿಗಳು) ಎಂದು ಅಂದಾಜಿಸಲಾಗಿದೆ. ಹಲವಾರು ಪ್ರಮುಖ ವ್ಯಾಪಾರ ಸಂಸ್ಥೆಗಳು ಆರ್‌ಸಿಬಿಯನ್ನು ಖರೀದಿಸಲು ಆಸಕ್ತಿ ಹೊಂದಿರುವಂತೆ ತೋರುತ್ತಿದೆ. ಅದಾನಿ ಗ್ರೂಪ್, ಜೆಎಸ್‌ಡಬ್ಲ್ಯೂ ಗ್ರೂಪ್, ಆದರ್ ಪೂನವಲ್ಲ (ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ಸ್ಪರ್ಧೆಯಲ್ಲಿರುವ ಇತರ ಕೆಲವು ಪ್ರಮುಖ ಕಂಪನಿಗಳು. ಅಲ್ಲದೆ, ಇತ್ತೀಚಿಗೆ ಕನ್ನಡದ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ ಕೂಡ ಪ್ರಾಂಚೈಸಿ ಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿತ್ತು,(ಏಜೆನ್ಸೀಸ್).