ದೇಶ

ರಾಹುಲ್​ ಗಾಂಧಿಯನ್ನ ನಂಬಿದ್ರೆ ಕೆಲಸ ಆಗಲ್ಲ!...ರ‍್ಯಾಲಿ ಮುಂದೂಡುವಂತೆ ಅಖಿಲೇಶ್​​, ಉದ್ಧವ್, ದೀದಿ ಮೊರೆ ಹೋದ ದೆಹಲಿ ವ್ಯಾಪಾರಸ್ಥರು! | India Bloc Rally

India Bloc Rally: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಮೂರ್ನಾಲ್ಕು ಬಾರಿ ಪತ್ರ ಬರೆದು ರ‍್ಯಾಲಿ ಮುಂದೂಡುವಂತೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ದೆಹಲಿಯ ವ್ಯಾಪಾರಿಗಳು ಈಗ ಇಂಡಿಯಾ ಒಕ್ಕೂಟದ ಇತರ ಪ್ರಮುಖ ನಾಯಕರಾದ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್ ಮತ್ತು ಉದ್ಧವ್ ಠಾಕ್ರೆ ಮೊರೆ ಹೋಗಿದ್ದಾರೆ.

ದೀಪಾವಳಿ ಮತ್ತು ಧನ್‌ತೇರಸ್ ಹಬ್ಬದ ಪ್ರಮುಖ ವ್ಯಾಪಾರ ಅವಧಿಯನ್ನು ಉಳಿಸಿಕೊಳ್ಳಲು ನವೆಂಬರ್ 1 ರಂದು ರಾಮಲೀಲಾ ಮೈದಾನದಲ್ಲಿ ನಿಗದಿಯಾಗಿರುವ ಬೃಹತ್ ರ‍್ಯಾಲಿಯನ್ನು ನವೆಂಬರ್ 10-11 ರ ಬಳಿಕದ ದಿನಾಂಕಕ್ಕೆ ಮುಂದೂಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

ವ್ಯಾಪಾರ ಮತ್ತು ಸಾರಿಗೆ ಮೇಲೆ ಪರಿಣಾಮ!

ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ನೀಡಿರುವ ಮಾಹಿತಿಯ ಪ್ರಕಾರ, ಕೇಂದ್ರ ಮತ್ತು ಹಳೆಯ ದೆಹಲಿಯ ಸುಮಾರು 20 ಪ್ರಮುಖ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿದಿನ ಅಂದಾಜು 10,000 ರಿಂದ 12,000 ಕೋಟಿ ರೂ. ಮೌಲ್ಯದ ವ್ಯವಹಾರ ನಡೆಯುತ್ತದೆ. ದೀಪಾವಳಿಗೆ ಮುನ್ನ ಬರುವ ನವೆಂಬರ್ 1 ರ ದಿನವು ವ್ಯಾಪಾರಸ್ಥರಿಗೆ ಸರಕುಗಳನ್ನು ಸಂಗ್ರಹಿಸಲು ಮತ್ತು ಹಬ್ಬಕ್ಕೆ ಸಿದ್ಧತೆ ನಡೆಸಲು ಅತ್ಯಂತ ನಿರ್ಣಾಯಕವಾಗಿದೆ. ಧನ್‌ತೇರಸ್ ನವೆಂಬರ್ 6 ರಂದು ಮತ್ತು ದೀಪಾವಳಿ ನವೆಂಬರ್ 8 ರಂದು ಬರಲಿದ್ದು, ಇಂತಹ ಸಮಯದಲ್ಲಿ ಪ್ರತಿಭಟನೆ ನಡೆಸಿದ್ದೇ ಆದಲ್ಲಿ ನಮ್ಮ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ ಎನ್ನುವುದು ವ್ಯಾಪರಸ್ಥರ ಆತಂಕ.

ಟ್ರಾಫಿಕ್ ಸಮಸ್ಯೆ!..

ರ‍್ಯಾಲಿಯಲ್ಲಿ ಸುಮಾರು 10 ಲಕ್ಷ ಜನರು ಹಾಗೂ 15,000 ರಿಂದ 20,000 ವಾಹನಗಳು ಸೇರುವು ಸಾಧ್ಯತೆ ಇದ್ದು, ಆದರೆ, ರಾಮಲೀಲಾ ಮೈದಾನದಲ್ಲಿ ಕನಿಷ್ಠ 200 ದೊಡ್ಡ ಬಸ್‌ಗಳನ್ನು ನಿಲ್ಲಿಸಲು ಕೂಡ ಸರಿಯಾದ ಸ್ಥಳಾವಕಾಶವಿಲ್ಲ ಎಂದು ವ್ಯಾಪಾರಿಗಳ ಸಂಘ ಆರೋಪಿಸಿದೆ. ಇದರಿಂದಾಗಿ ಜವಹರಲಾಲ್ ನೆಹರು ಮಾರ್ಗ್, ಬಹದ್ದೂರ್ ಶಾ ಜಫರ್ ಮಾರ್ಗ್, ನೇತಾಜಿ ಸುಭಾಷ್ ಮಾರ್ಗ್ ಹಾಗೂ ಚಾಂದನಿ ಚೌಕ್, ಅಜ್ಮೇರಿ ಗೇಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗಿ ಲಾಕ್‌ಡೌನ್ ಸೃಷ್ಠಿಯಾಗುವ ಭೀತಿ ಎದುರಾಗಿದೆ.

ಚಾಂದನಿ ಚೌಕ್, ಸಾದರ್ ಬಜಾರ್, ಕಾನಾಟ್ ಪ್ಲೇಸ್, ಖಾರಿ ಬೌಲಿ, ಭಾಗೀರಥಿ ಪ್ಯಾಲೇಸ್, ಸಾವ್ರಿ ಬಜಾರ್, ಕರೋಲ್ ಬಾಗ್ ಮತ್ತು ದರಿಯಾಗಂಜ್ ಮುಂತಾದ ಪ್ರಮುಖ ಮಾರುಕಟ್ಟೆಗಳಿಗೆ ಪ್ರತಿದಿನ ಸುಮಾರು 5,000 ಟ್ರಕ್‌ಗಳು ಮತ್ತು ಟೆಂಪೋಗಳು ಸರಕುಗಳನ್ನು ತರುತ್ತವೆ. ಅಲ್ಲದೆ, ಎನ್‌ಸಿಆರ್ ನಗರಗಳಿಗೆ ಸರಕುಗಳನ್ನು ಸಾಗಿಸಲು ಮತ್ತ 3,000 ವಾಹನಗಳು ಸಂಚರಿಸುತ್ತವೆ. ರ‍್ಯಾಲಿಯ ಕಾರಣದಿಂದ ಈ ಎಲ್ಲಾ ವ್ಯಾಪಾರ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಳ್ಳುವ ಆತಂಕವಿದೆ. ಅಕ್ಟೋಬರ್ 31 ರಿಂದಲೇ ಸಿಂಘು, ಟಿಕ್ರಿ, ಗಾಜಿಪುರ ಮತ್ತು ಬದರಪುರ ಗಡಿಗಳಲ್ಲಿ ಬ್ಯಾರಿಕೇಡ್‌ಗಳು ಹಾಗೂ ವಾಹನಗಳ ನಿರ್ಬಂಧದಿಂದಾಗಿ ಸಾರಿಗೆಯೂ ಅಸ್ತವ್ಯಸ್ತಗೊಳ್ಳಲಿದೆ ಎಂದು ಸಿಟಿಐ ಎಚ್ಚರಿಸಿದೆ.

ನಮ್ಮ ಕೊನೆಯ ಭರವಸೆ ನೀವೇ...

ರ‍್ಯಾಲಿಯನ್ನು ದೀಪಾವಳಿ ನಂತರಕ್ಕೆ ಮುಂದೂಡಬೇಕು ಅಥವಾ ಸುಮಾರು 15,000 ವಾಹನಗಳ ನಿಲುಗಡೆಗೆ ಸ್ಥಳವಿರುವ ಬುರಾರಿ ಮೈದಾನಕ್ಕೆ ಸ್ಥಳಾಂತರಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ವ್ಯಾಪಾರಿಗಳು ಮುಂದಿಟ್ಟಿದ್ದಾರೆ. ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಮಾತನಾಡಿ, ನಾವು ರ‍್ಯಾಲಿಯ ವಿರೋಧಿಯಲ್ಲ, ಆದರೆ ದೀಪಾವಳಿ ಸಮಯದಲ್ಲಿ ನಮ್ಮ ಜೀವನಾಧಾರವನ್ನು ರಕ್ಷಿಸುವಂತೆ ಕೈಮುಗಿದು ಬೇಡಿಕೊಳ್ಳುತ್ತಿದ್ದೇವೆ. ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದರೂ ಅವರು ಒಪ್ಪಲಿಲ್ಲ, ಈಗ ನಮ್ಮ ಕೊನೆಯ ಭರವಸೆ ನಿಮ್ಮ ಮೇಲಿದೆ ಎಂದು ಇಂಡಿಯಾ ಒಕ್ಕೂಟದ ನಾಯಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇಂಡಿಯಾ ಒಕ್ಕೂಟದ ನಾಯಕರು ಈ ರ‍್ಯಾಲಿಯನ್ನು ಹಮ್ಮಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಿಇಸಿ ಅವರನ್ನು ವಜಾಗೊಳಿಸಿದರೆ ಈ ಪ್ರತಿಭಟನೆ ಕೇವಲ 30 ಸೆಕೆಂಡುಗಳಲ್ಲಿ ಕೊನೆಗೊಳ್ಳಲಿದೆ ಎಂದು ರಾಹುಲ್ ಗಾಂಧಿ ಈ ಹಿಂದೆ ಹೇಳಿಕೆ ನೀಡಿದ್ದರು. ದೆಹಲಿ ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದು, ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಲು ಸೂಚಿಸಿದ್ದಾರೆ. ವ್ಯಾಪಾರಿಗಳ ಈ ಆತಂಕಕ್ಕೆ ಉಳಿದ ವಿಪಕ್ಷ ನಾಯಕರ ಕಡೆಯಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ(ಏಜೆನ್ಸೀಸ್​).