BhajanLal Sharma (ಚಿತ್ರ X) 
ದೇಶ

ನೀಟ್ ಆಕ್ರೋಶದ ಬೆನ್ನಲ್ಲೇ ಯುವ ಪೀಳಿಗೆಗೆ ಗಾಳ: 80 ಸಾವಿರ ನವ ಮತದಾರರಿಗೆ ಸಿಎಂ ಕಚೇರಿಯಿಂದ ಪತ್ರ! BhajanLal Sharma

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ 'ಜೆನ್ ಝಿ' ಯುವಪೀಳಿಗೆ ನಡೆಸಿದ ಬೃಹತ್ ಪ್ರತಿಭಟನೆ ಎಫೆಕ್ಟ್​
  • ಪ್ರಧಾನಿ ಮೋದಿ ಅವರ ಯುವಜನರ ಸಂಪರ್ಕ ಹಾದಿಯನ್ನೇ ಹಿಡಿದಿರುವ ರಾಜಸ್ಥಾನ ಸಿಎಂ ಭಜನ್​ ಲಾಲ್​ ಶರ್ಮಾ
  • ರಾಜ್ಯದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕರಿಗೆ ವೈಯಕ್ತಿಕವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ಮತದಾನದ ಜಾಗೃತಿ ಮೂಡಿಸಿದ್ದಾರೆ

ರಾಜಸ್ಥಾನ: ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ 'ಜೆನ್ ಝಿ' ಯುವಪೀಳಿಗೆ ನಡೆಸಿದ ಬೃಹತ್ ಪ್ರತಿಭಟನೆ ಮತ್ತು ನೀಟ್ ಅಕ್ರಮಗಳ ವಿರುದ್ಧದ ಚಳುವಳಿಯ ನಂತರ ಯುವ ಮತದಾರರನ್ನು ಸೆಳೆಯಲು ಬಿಜೆಪಿ (

BhajanLal Sharma) 

ಹೊಸ ರಾಜಕೀಯ ತಂತ್ರಕ್ಕೆ ಮುಂದಾಗಿದೆ. ಆದಾಗ್ಯೂ, ಪ್ರಧಾನಿ ಮೋದಿ ಅವರ ಯುವಜನರ ಸಂಪರ್ಕ ಹಾದಿಯನ್ನೇ ಹಿಡಿದಿರುವ ರಾಜಸ್ಥಾನ ಸಿಎಂ ಭಜನ್​ ಲಾಲ್​ ಶರ್ಮಾ, ರಾಜ್ಯದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯರಿಗೆ ವೈಯಕ್ತಿಕವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ಮತದಾನದ ಜಾಗೃತಿ ಮೂಡಿಸಿದ್ದಾರೆ.

80 ಸಾವಿರ ಯುವಕರಿಗೆ ಸಿಎಂ ಕಚೇರಿಯಿಂದ ಪತ್ರ!

ರಾಜಸ್ಥಾನ ಸರ್ಕಾರವು ಜುಲೈ ತಿಂಗಳಿನಿಂದ ಈ ವಿಶೇಷ ಯುವ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದು, ಇಲ್ಲಿಯವರೆಗೆ 18ನೇ ವರ್ಷಕ್ಕೆ ಕಾಲಿಟ್ಟ ಸುಮಾರು 80,000 ಯುವಕ-ಯುವತಿಯರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ನೇರವಾಗಿ ಅಂಚೆ ಪತ್ರಗಳನ್ನು ಕಳುಹಿಸಲಾಗುತ್ತಿದೆ. 
ಹಿಂದಿ ಭಾಷೆಯಲ್ಲಿರುವ ಈ ಅಧಿಕೃತ ಪತ್ರದಲ್ಲಿ, ಯುವಕರಿಗೆ 18 ವರ್ಷ ತುಂಬಿದ್ದರೆ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ಜೊತೆಗೆ ತಕ್ಷಣವೇ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೋರಲಾಗುತ್ತಿದೆ.

'ವಿಕಸಿತ ಭಾರತ'ಕ್ಕೆ ಯುವಶಕ್ತಿಯೇ ಅಡಿಪಾಯ

ಸಿಎಂ ಕಚೇರಿಯಿಂದ ಕಳುಹಿಸಲಾಗುತ್ತಿರುವ ಈ ವಿಶೇಷ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಉಲ್ಲೇಖಿಸಲಾಗಿದೆ. "ಸಮರ್ಥ ಹಾಗೂ ಸಶಕ್ತ ಯುವಜನತೆಯೇ ಸಮೃದ್ಧ ದೇಶದ ಬುನಾದಿ" ಎಂಬ ಪ್ರಧಾನಿಯವರ ಮಾತನ್ನು ಉಲ್ಲೇಖಿಸಿರುವ ಸಿಎಂ ಶರ್ಮಾ, 'ವಿಕಸಿತ ಭಾರತ' ಹಾಗೂ 'ವಿಕಸಿತ ರಾಜಸ್ಥಾನ' ಕಟ್ಟಲು ನವ ಮತದಾರರ ಆಲೋಚನೆ ಮತ್ತು ಶಕ್ತಿ ಅತ್ಯಗತ್ಯ ಎಂದಿದ್ದಾರೆ.
ರಾಜಸ್ಥಾನ ಸರ್ಕಾರದ ಅಧಿಕೃತ ಲಾಂಛನ, ಪ್ರಧಾನಿ ಮೋದಿ ಮತ್ತು ಸಿಎಂ ಭಜನ್ ಲಾಲ್ ಶರ್ಮಾ ಅವರ ಭಾವಚಿತ್ರವಿರುವ ಈ ಪತ್ರದಲ್ಲಿ, ಮುಂದಿನ ದಿನಗಳಲ್ಲಿ ನವ ಮತದಾರರನ್ನು ಖುದ್ದಾಗಿ ಭೇಟಿಯಾಗುವುದಾಗಿಯೂ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ರಾಜಕೀಯ ತಂತ್ರಕ್ಕೆ ಕಾರಣವೇನು?

ಕೆಲವು ದಿನಗಳ ಹಿಂದಷ್ಟೇ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್-ಯುಜಿ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಸೋಶಿಯಲ್​ ಮೀಡಿಯಾ, ಮೀಮ್ಸ್​ ಮತ್ತು ರೀಲ್ಸ್‌ಗಳ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದರು. ಆದಾಗ್ಯೂ, ಯುವಕರ ತೀವ್ರ ಆಕ್ರೋಶದ ಪರಿಣಾಮ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು.
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನಿ ಮೋದಿ ಸ್ವತಃ ತಡರಾತ್ರಿ ಸೆಲ್ಫಿ ವಿಡಿಯೋ ಹಂಚಿಕೊಂಡು, ಯುವಕರನ್ನು 'ಸ್ನೇಹಿತರು' ಎಂದು ಸಂಬೋಧಿಸಿ, ಪೇಪರ್ ಲೀಕ್ ವಿರುದ್ಧ ಕಠಿಣ ಕಾನೂನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಇದೀಗ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ನಿರ್ಣಾಯಕ ಶಕ್ತಿಯಾಗುತ್ತಿರುವ ಯುವ ಪೀಳಿಗೆಯನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಈ 'ಪರ್ಸನಲ್ ಟಚ್' ತಂತ್ರ ರೂಪಿಸಿದೆ (ಏಜೆನ್ಸೀಸ್​).