BRICS Summit | ಬ್ರಿಕ್ಸ್ ಲಾಭದ ಬಗ್ಗೆ ಚಿದಂಬರಂ ಪ್ರಶ್ನೆ: ರಾಜತಾಂತ್ರಿಕ ತಾಕತ್ತು ನೆನಪಿಸಿ ಪರೋಕ್ಷ ತಿರುಗೇಟು ನೀಡಿದ ಸಂಸದ ಶಶಿ ತರೂರ್!
ನವದೆಹಲಿ: ಬ್ರಿಕ್ಸ್ ಶೃಂಗಸಭೆಯಿಂದ (BRICS Summit) ಭಾರತಕ್ಕೆ ಸಿಕ್ಕಿರುವ ಪ್ರಯೋಜನಗಳು ಏನು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ ಬೆನ್ನಲ್ಲೇ, ಅವರದೇ ಪಕ್ಷದ ಸಂಸದ ಶಶಿ ತರೂರ್ ಅವರು ಬ್ರಿಕ್ಸ್ ಒಕ್ಕೂಟವು ಭಾರತದ ರಾಜತಾಂತ್ರಿಕ ಸಂಘಟನಾ ಶಕ್ತಿಯನ್ನು ತೋರಿಸುತ್ತದೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಮುನ್ನ ಮಾತನಾಡಿದ ತರೂರ್, ಈ ಒಕ್ಕೂಟವು ಜಾಗತಿಕ ದಕ್ಷಿಣದ ದೇಶಗಳಿಗೆ ಒಂದು ಪ್ರಮುಖ ವೇದಿಕೆಯಾಗಿದೆ ಎಂದಿದ್ದಾರೆ.
ಮೊದಲನೆಯದಾಗಿ, ನಾವು ಜಾಗತಿಕ ದಕ್ಷಿಣದ ದೇಶಗಳಿಗೆ ಪ್ರಮುಖ ವೇದಿಕೆಯನ್ನು ಒದಗಿಸುತ್ತಿದ್ದೇವೆ. ಜಾಗತಿಕ ದಕ್ಷಿಣದಲ್ಲಿ 100ಕ್ಕೂ ಹೆಚ್ಚು ದೇಶಗಳಿವೆ, ಆದರೆ ಇಲ್ಲಿ ಜಾಗತಿಕ ದಕ್ಷಿಣದ 11 ಪ್ರಮುಖ ದೇಶಗಳಿವೆ. ಇವು ಜಾಗತಿಕ ಮಟ್ಟದ ವಿವಿಧ ಅಭಿಪ್ರಾಯಗಳನ್ನು ಹಾಗೂ ದೇಶಗಳ ವೈವಿಧ್ಯತೆಯನ್ನು ಪ್ರತಿನಿಧಿಸುತ್ತವೆ. ಈ 11 ಬ್ರಿಕ್ಸ್ ದೇಶಗಳು ವಿಶ್ವದ ಬಹುಸಂಖ್ಯಾತ ಜನಸಂಖ್ಯೆಯನ್ನು ಮತ್ತು ಜಾಗತಿಕ ಜಿಡಿಪಿಯ ಶೇಕಡಾ 41 ರಷ್ಟನ್ನು ಪ್ರತಿನಿಧಿಸುತ್ತವೆ ಎಂದು ಶಶಿ ತರೂರ್ ಬ್ರಿಕ್ಸ್‌ನ ಪ್ರಾಮುಖ್ಯತೆಯನ್ನು ಎತ್ತಿಹಿಡಿದರು.
ಶೃಂಗಸಭೆಯ ಆತಿಥ್ಯ ವಹಿಸುವುದು ದೊಡ್ಡ ವಿಷಯ ಎಂದು ಅಭಿಪ್ರಾಯಪಟ್ಟಿರುವ ತರೂರ್, ಈ ಕಾರ್ಯಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮೌಲ್ಯವಿದೆ ಎಂದರು. ಎರಡನೆಯದಾಗಿ, ಬ್ರಿಕ್ಸ್ ಸದಸ್ಯರು ಮಾತ್ರವಲ್ಲದೆ ವೀಕ್ಷಕ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಗಳು, 12ಕ್ಕೂ ಹೆಚ್ಚು ದೇಶಗಳ ಮುಖ್ಯಸ್ಥರು ಆಗಮಿಸುತ್ತಿರುವುದು ನಮಗೆ ಪ್ರತಿಷ್ಠೆಯ ವಿಷಯವಾಗಿದೆ. ಇದು ನಮಗಿರುವ ರಾಜತಾಂತ್ರಿಕ ಸಂಘಟನಾ ಶಕ್ತಿಯನ್ನು ತೋರಿಸುತ್ತದೆ, ಇದು ಜಾಗತಿಕ ವೇದಿಕೆಯಲ್ಲಿ ತನ್ನದೇ ಆದ ಮೌಲ್ಯವನ್ನು ಹೊಂದಿದೆ ಎಂದು ಹೇಳಿದರು.
ಪ್ರಯೋಜನ ಮಾತ್ರ ಅಲ್ಲ, ಸವಾಲುಗಳು ಇವೆ!...
ಈ ಒಕ್ಕೂಟಕ್ಕಿರುವ ಕೆಲವು ಸವಾಲುಗಳ ಬಗ್ಗೆಯೂ ಮಾತನಾಡಿದ ತರೂರ್, ಇಲ್ಲಿ ಕೇವಲ ಪ್ರಯೋಜನಗಳು ಮಾತ್ರ ಇವೆ ಎಂದಲ್ಲ, ಸವಾಲುಗಳೂ ಇವೆ. ಮುಖ್ಯವಾಗಿ ಜಾಗತಿಕ ವಿಷಯಗಳ ಕುರಿತು ಒಂದು ಸಮ್ಮತ ಘೋಷಣೆ ಅಥವಾ ಒಮ್ಮತದ ಅಭಿಪ್ರಾಯಕ್ಕೆ ಬರುವುದು ಕಷ್ಟಕರವಾಗಿದೆ ಎಂದರು.
ಬ್ರಿಕ್ಸ್ ದೇಶಗಳ ನಡುವೆ ಒಮ್ಮತದ ಅಭಿಪ್ರಾಯ ಮೂಡಿಸುವುದು ದೊಡ್ಡ ಸವಾಲಾಗಿದೆ ಎಂಬುದಕ್ಕೆ ವಿದೇಶಾಂಗ ಸಚಿವರ ಸಭೆಯನ್ನು ಶಶಿ ತರೂರ್ ಉಲ್ಲೇಖಿಸಿದರು. ಇರಾನ್ ಯುದ್ಧ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಬ್ರಿಕ್ಸ್ ವಿದೇಶಾಂಗ ಸಚಿವರು ಜಂಟಿ ಹೇಳಿಕೆಯನ್ನು ಅಂಗೀಕರಿಸಲು ಸಾಧ್ಯವಾಗದಿರುವುದನ್ನು ಅವರು ನೆನಪಿಸಿದರು. ಈ ಬಾರಿಯ ಶೃಂಗಸಭೆಯಲ್ಲೂ ಜಂಟಿ ಹೇಳಿಕೆ ಹೊರಬರದಿದ್ದರೆ, ಅದನ್ನು ಒಕ್ಕೂಟದ ಹಿನ್ನಡೆ ಹಾಗೂ ಆಂತರಿಕ ಭಿನ್ನಾಭಿಪ್ರಾಯದ ಸಂಕೇತವೆಂದು ಕೆಲವರು ವ್ಯಾಖ್ಯಾನಿಸಬಹುದು. ಹೀಗಾಗಿ, ಈ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿ ಎಲ್ಲರನ್ನೂ ಒಟ್ಟಿಗೆ ಒಯ್ಯುವುದು ಭಾರತದ ರಾಜತಾಂತ್ರಿಕರಿಗೆ ನಿಜವಾದ ಸವಾಲಾಗಿದೆ ಎಂದು ಅವರು ಹೇಳಿದರು.
ಈ ವರ್ಷದ ಮೇ ತಿಂಗಳಲ್ಲಿ ನವದೆಹಲಿಯಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆ ನಡೆದಾಗ, ಯುದ್ಧದ ವಿಷಯದಲ್ಲಿ ಇರಾನ್ ಮತ್ತು ಯುಎಇ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಜಂಟಿ ಘೋಷಣೆ ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಭಾರತಕ್ಕೆ ಬ್ರಿಕ್ಸ್ ಒಳಗಿನ ರಾಜತಾಂತ್ರಿಕ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿ ಎರಡು ದಿನಗಳ ಸಭೆಯ ನಂತರ ಜಂಟಿ ಹೇಳಿಕೆ ನೀಡಲು ಸಾಧ್ಯವಾಗಿರಲಿಲ್ಲ.
ಭಾರತದ ವ್ಯಾಪಾರ ಅಸಮತೋಲನದ ಬಗ್ಗೆಯೂ ಮಾತನಾಡಿದ ಕಾಂಗ್ರೆಸ್ ನಾಯಕ, ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರ ಬೆಳೆಯುತ್ತಿದೆ, ಆದರೆ ಹಲವು ರೀತಿಯಲ್ಲಿ ಅದು ನಮಗೆ ಅನನುಕೂಲವಾಗಿದೆ. ಬ್ರಿಕ್ಸ್ ದೇಶಗಳಿಗೆ ನಮ್ಮ ರಫ್ತು ಕಡಿಮೆಯಾಗಿದೆ, ಆದರೆ ಬ್ರಿಕ್ಸ್ ದೇಶಗಳಿಂದ ನಮ್ಮ ಆಮದು ಹೆಚ್ಚಾಗಿದೆ ಎಂದು ಹೇಳಿದರು.
ಚಿದಂಬರಂ ಹೇಳಿದ್ದೇನು..?
ಬ್ರಿಕ್ಸ್ ಶೃಂಗಸಭೆಯ ಕುರಿತಾಗಿ ಎಎನ್ಐ ಜೊತೆ ಮಾತನಾಡಿದ ಚಿದಂಬರಂ, ಭಾರತವು ಬ್ರಿಕ್ಸ್, ಶಾಂಘೈ ಸಹಕಾರ ಸಂಸ್ಥೆ (SCO), ಜಿ20 (G20) ಮತ್ತು ಕ್ವಾಡ್ (QUAD) ನಂತಹ ಹಲವು ಬಹುಪಕ್ಷೀಯ ಒಕ್ಕೂಟಗಳ ಭಾಗವಾಗಿದೆ, ಆದರೆ ಇವುಗಳಿಂದ ದೇಶಕ್ಕೆ ಸಿಕ್ಕಿರುವ ಪ್ರಯೋಜನಗಳೇನು ಎಂದು ಪ್ರಶ್ನಿಸಿದ್ದಾರೆ. ಎಷ್ಟು ಮಂದಿ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಬರುತ್ತಿದ್ದಾರೋ ನನಗೆ ಗೊತ್ತಿಲ್ಲ. ಕಳೆದ ಎರಡ್ಮೂರು ಶೃಂಗಸಭೆಗಳು ಯಾವುದೇ ಸ್ಪಷ್ಟ ಫಲಿತಾಂಶಗಳನ್ನು ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್).