ಗ್ರಾಹಕರಿಗೆ ದರ ಏರಿಕೆ ಬಿಸಿ  
ದೇಶ

ಯುದ್ಧದ ಎಫೆಕ್ಟ್​: ಎಲ್​ಪಿಜಿ ಸಿಲಿಂಡರ್ ದರ ಹೆಚ್ಚಳ​ ಬೆನ್ನಲ್ಲೇ ಜನರಿಗೆ ತಟ್ಟಲಿದೆ ಮತ್ತೊಂದು ಬೆಲೆ ಏರಿಕೆ ಬಿಸಿ!

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮತ್ತು ಇಸ್ರೇಲ್​-ಅಮೆರಿಕ ನಡುವಿನ ಯುದ್ಧ
  • ದೇಶದ ಜನತೆಗೆ ತಟ್ಟಿದ ಯುದ್ಧದ ಬಿಸಿ
  • ಗೃಹ ಬಳಕೆ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆ 60 ರೂ. ಏರಿಕೆ
  • ಸಿಲಿಂಡರ್​ ಬೆಲೆ ಏರಿಕೆ ಬೆನ್ನಲ್ಲೇ ಇತರೆ ದರಗಳು ಹೆಚ್ಚಾಗುವ ಸಾಧ್ಯತೆ
ಬೆಂಗಳೂರು: ಇರಾನ್​ ಮತ್ತು ಇಸ್ರೇಲ್​-ಅಮೆರಿಕ ನಡುವಿನ ಯುದ್ಧ ಇದೀಗ 11ನೇ ದಿನಕ್ಕೆ ಕಾಲಿಟ್ಟಿದ್ದು, ಸಂಘರ್ಷದಿಂದ ಮಧ್ಯಪ್ರಾಚ್ಯ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಮತ್ತೊಂದೆಡೆ, ಯುದ್ಧದ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿರುವ ಹಿನ್ನೆಲೆ ಇದೀಗ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಬಿಕ್ಕಟ್ಟಿನ ಗತಿ ನಿರ್ಮಾಣವಾಗಿದೆ. ಇರಾನ್​-ಇಸ್ರೇಲ್​ ಯುದ್ಧದ ಬಿಸಿ ಈಗ ಗೃಹ ಬಳಕೆ ಸಿಲಿಂಡರ್​ಗೆ ತಟ್ಟಿದ್ದು, ಭಾರತದಲ್ಲಿ ದಿಢೀರ್ 60 ರೂ.ಗೆ ಏರಿದೆ. ಇದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಲಿದೆ.
ದೇಶದಲ್ಲಿ ಯುದ್ಧದ ಬಿಕ್ಕಟ್ಟು ಜೋರಾಗಿದ್ದು, ಈಗಾಗಲೇ ಬಹುತೇಕ ನಗರಗಳಲ್ಲಿ ಅನಿಲ ಪೂರೈಕೆ ಸ್ಥಗಿತ ಎದುರಾಗಿದೆ. ಇದು ಜನಸಾಮಾನ್ಯರಿಗೆ ತೀವ್ರ ತೊಂದರೆ ಕೊಡಲಾರಂಭಿಸಿದೆ. ಎಲ್​ಪಿಜಿ ಸಿಲಿಂಡರ್​ ಪಡೆಯಲು ಮುಂದಿನ ಬುಕ್ಕಿಂಗ್​ಗೆ ಹೆಚ್ಚು ಸಮಯ ಕಾಯುವಂತ ಅನಿವಾರ್ಯತೆ ಶುರುವಾಗಿದೆ. ಸದ್ಯದ ಮಟ್ಟಿಗೆ ಇದು ಗೃಹ ಬಳಕೆ ಗ್ಯಾಸ್​ ಸಿಲಿಂಡರ್​ಗೆ ಮಾತ್ರವಿದೆ. ಆದರೆ, ಇನ್ನೆರೆಡು ದಿನಗಳಲ್ಲಿ ವಾಣಿಜ್ಯ ಬಳಕೆಯ ಅನಿಲಕ್ಕೂ ಈ ಬಿಕ್ಕಟ್ಟು ಕಾಡಲಿದೆ.
ಹೋಟೆಲ್ ಉದ್ಯಮವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಅದೆಷ್ಟೋ ಜನರ ಬದುಕು ಈಗ ತೀರ ಕಷ್ಟಕರವಾಗಿದೆ. ರಾಜ್ಯದಲ್ಲಿ ಇಂದಿನಿಂದಲೇ ಹೋಟೆಲ್​ಗಳಿಗೆ ಕಮರ್ಷಿಯಲ್ ಗ್ಯಾಸ್ ಸರಬರಾಜು ಆಗುತ್ತಿಲ್ಲ ಎಂಬ ಸುದ್ದಿ ಹೊರಬಿದ್ದ ಹಿನ್ನೆಲೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಮನವಿ

"ಹೋಟೆಲ್​, ಬೇಕರಿ, ಕ್ಯಾಂಟೀನ್​, ಪಿಜಿ, ಹಾಸ್ಟೆಲ್​ಗಳಲ್ಲಿ ವಾಣಿಜ್ಯ ಸಿಲಿಂಡರ್ ಅಭಾವ ಕಾಡಲಾರಂಭಿಸಿದೆ. ಇದರಿಂದ ಬಹಳಷ್ಟು ಜನಕ್ಕೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದು ಜನಸಾಮಾನ್ಯರಿಗೂ ತೊಂದರೆಯೇ. ದಯವಿಟ್ಟು ರಾಜ್ಯ ಸರ್ಕಾರ ತಕ್ಷಣವೇ ಗಮನ ಹರಿಸಿ, ಅಲಭ್ಯತೆಯನ್ನು ಸರಿಪಡಿಸಬೇಕು" ಎಂದು ಮನವಿ ಮಾಡಿದ್ದಾರೆ.
ಎಲ್​ಪಿಜಿ, ವಾಣಿಜ್ಯ ಸಿಲಿಂಡರ್​ ಗ್ಯಾಸ್, ಅಡುಗೆ ಎಣ್ಣೆ ದರ ಏರಿಕೆಯ ಜೊತೆಗೆ ಶೀಘ್ರವೇ ಪೆಟ್ರೋಲ್, ಡೀಸೆಲ್ ಬೆಲೆಗಳು ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಬಾರಿ ಒಂದಲ್ಲ‌, ಎರಡಲ್ಲ‌, ಲೀಟರ್​ಗೆ ಬರೋಬ್ಬರಿ 20 ರೂ.ಗಿಂತಲೂ ಹೆಚ್ಚು ದರ ಏರಿಕೆಯಾಗುವ‌ ಭೀತಿ ಎದರಾಗಿದೆ. ಪೆಟ್ರೋಲ್ ಪ್ರತಿ ಲೀಟರ್​ಗೆ 22 ರೂ. ಮತ್ತು ಡೀಸೆಲ್ 24 ರೂ.ವರೆಗೆ ಹೆಚ್ಚಳ ಆಗಬಹುದು ಎನ್ನಲಾಗಿದೆ. ಆದ್ರೆ, ಅಧಿಕೃತ ಪ್ರಕಟಣೆ ಹೊರಬೀಳುವವರೆಗೂ ಕಾಯಬೇಕಿದೆ.

ಇಂಧನ ದರ ಏರಿಕೆಗೆ ಎಚ್​ಪಿಸಿಲ್​ ಸ್ಪಷ್ಟನೆ

ಪ್ರಿಯ ಗ್ರಾಹಕರೇ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂಧನ ಪೂರೈಕೆಯಲ್ಲಿನ ಕೊರತೆಯ ಸುದ್ದಿಗಳು ದಾರಿ ತಪ್ಪಿಸುವಂತದ್ದು ಮತ್ತು ಆಧಾರರಹಿತವಾಗಿವೆ. ದೇಶದಲ್ಲಿ ಸಾಕಷ್ಟು ಇಂಧನದ ಲಭ್ಯತೆಯಿದೆ. ಜನಸಾಮಾನ್ಯರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಹಿಂದೂಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಷನ್​ ಲಿಮಿಟೆಡ್​ ಸಂಸ್ಥೆ ತನ್ನ ಗ್ರಾಹರಿಗೆ ಸಂದೇಶದ ಮುಖೇನ ಮಾಹಿತಿ ನೀಡಿದೆ.