ಪತ್ನಿ ತಲೆಕಡಿದು ಫ್ರಿಡ್ಜ್​ನಲ್ಲಿಟ್ಟ ಕೊಲೆಗಡುಕ ಪತಿರಾಯ ಹೇಳಿದ ಬುದ್ಧಿ ಮಾತುಗಳಿವು 
ದೇಶ

ಈ ಮಿಸ್ಟೇಕ್​ ನೀವೂ ಮಾಡ್ಬೇಡಿ! ಪತ್ನಿ ತಲೆಕಡಿದು ಫ್ರಿಡ್ಜ್​ನಲ್ಲಿಟ್ಟ ಕೊಲೆಗಡುಕ ಪತಿರಾಯ ಹೇಳಿದ ಬುದ್ಧಿ ಮಾತುಗಳಿವು | Murder Case

ಪ್ರಮುಖ ಮುಖ್ಯಾಂಶಗಳು

  • ಸೆ.6ರಂದು ಗುವಾಹಾಟಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕೊಳೆತ ಮೃತದೇಹ ಪತ್ತೆ
  • ಕೆಲವು ತಿಂಗಳ ಹಿಂದೆಯಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ಯುವತಿ ಗಂಡನಿಂದಲೇ ಬರ್ಬರವಾಗಿ ಕೊಲೆ
  • ಹೆಂಡತಿಯ ತಲೆ ಕಡಿದು ಫ್ರಿಡ್ಜ್​ನಲ್ಲಿಟ್ಟ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲ ಎಂದ ಆರೋಪಿಯಿಂದ ಬುದ್ಧಿ ಮಾತುಗಳು
ಗುವಾಹಟಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ನವವಿವಾಹಿತೆ ರಿಯಾ ತಾಲುಕ್ದಾರ್ (26) ಭೀಕರ ಹತ್ಯೆ ಪ್ರಕರಣಕ್ಕೆ (Murder Case) ಸಂಬಂಧಿಸಿದಂತೆ, ಬಂಧಿತ ಪತಿ ರಾಮಾನುಜ್ ಗೋಸ್ವಾಮಿ ಇದೀಗ ಸಾರ್ವಜನಿಕರಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾನೆ. ಕೋರ್ಟ್​ ಆವರಣದಲ್ಲೇ ಮಾಧ್ಯಮಗಳ ಮುಂದೆ ಅನಾಮಧೇಯ ವ್ಯಕ್ತಿಯನ್ನು ಕೊಲ್ಲುವುದಾಗಿ ಓಪನ್​ ಬೆದರಿಕೆ ಹಾಕಿದ್ದವನ ಬಾಯಿಂದ ಅಚ್ಚರಿ ಹೇಳಿಕೆಗಳು ಹೊರಬಂದಿವೆ.​
ಮಂಗಳವಾರ (ಸೆ.08) ಪೊಲೀಸರು ಆತನನ್ನು ಗುವಾಹಟಿ ನ್ಯಾಯಾಲಯಕ್ಕೆ ಕರೆತರುತ್ತಿದ್ದಾಗ, ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರೋಪಿ, ನನ್ನ ಪತ್ನಿಯನ್ನು ಕೊಂದಿದ್ದಕ್ಕೆ ಯಾವುದೇ ಪಶ್ಚಾತಾಪವಿಲ್ಲ. ಇದಕ್ಕಾಗಿ ನಾನು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ಆದರೆ, ಒಂದಂತು ನಿಜ. ಜೈಲಿನಿಂದ ಹೊರಬಂದ ಕೂಡಲೇ ಆ 'ಶುಗರ್ ಡ್ಯಾಡಿ'ಯನ್ನು ಕೊಲುತ್ತೇನೆ ಎಂದು ಹೇಳಿದ್ದ. ಅಸಲಿಗೆ ಯಾರು ಆ ಶುಗರ್​ ಡ್ಯಾಡಿ ಎಂಬುದನ್ನು ಪತ್ರಕರ್ತರು ಮಾತ್ರವಲ್ಲ, ಸ್ವತಃ ಪೊಲೀಸರು ತನಿಖೆಯಲ್ಲಿ ಪ್ರಶ್ನಿಸಿದ್ದಾರೆ.
ಇದಾದ ಬಳಿಕ ಖಾಕಿ ಪಡೆ ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಒಂದಷ್ಟು ಪತ್ರಕರ್ತರು ಆತನನ್ನು ಮತ್ತೊಮ್ಮೆ ಮಾತನಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. "ನಾನು ಮಾಡಿದ್ದು ತಪ್ಪು. ಅದನ್ನು ನಾನು ಬಹಿರಂಗವಾಗಿ ಎಲ್ಲ ಮುಂದೆ ಒಪ್ಪಿಕೊಳ್ಳುತ್ತೇನೆ. ಜನರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು. ಆದರೆ, ನಾನು ಎಲ್ಲರ ಬಳಿ ಕೇಳುವುದಿಷ್ಟೇ. ಯಾರೂ ನಿಮ್ಮ ಜೀವನದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಎಂದು ಕೇಳಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

ಏನಿದು ಘಟನೆ?

ಸೆ.6ರಂದು ಗುವಾಹಟಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕೊಳೆತ ವಾಸನೆ ಬರುತ್ತಿದೆ ಎಂದು ಅಕ್ಕ-ಪಕದ ಮನೆಯವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ನವದಂಪತಿ ರಿಯಾ ಮತ್ತು ರಾಮಾನುಜ್​ ವಾಸವಿದ್ದ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದರು. ಈ ವೇಳೆ, ಕೆಲವೇ ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಿಯಾ ತಾಲುಕ್ದಾರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಕಂಡು ಬೆರಗಾದರು.
ದೇಹದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರಿಯಾಳ ಬೆರಳುಗಳನ್ನು ಕತ್ತರಿಸಿದ್ದು, ಆಕೆಯ ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು. ರುಂಡ ಇಲ್ಲದ ದೇಹವನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ಶೋಧದ ಬಳಿಕ, ಅಪಾರ್ಟ್‌ಮೆಂಟ್‌ನ ಫ್ರಿಡ್ಜ್‌ನಲ್ಲಿದ್ದ ಪ್ಲಾಸ್ಟಿಕ್ ಚೀಲವೊಂದರಲ್ಲಿ ರಿಯಾಳ ಕತ್ತರಿಸಿದ ತಲೆ ಪತ್ತೆಹಚ್ಚಿದರು. ಪ್ರಕರಣ ದಾಖಲಿಸಿಕೊಂಡ ತಕ್ಷಣವೇ ತಲೆಮರಿಸಿಕೊಂಡಿದ್ದ ಪತಿ ರಾಮಾನುಜ್​, ತಾನೇ ಖುದ್ದಾಗಿ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಸ್ತುತ, ತನಿಖೆ ಚುರುಕಾಗಿ ನಡೆಯುತ್ತಿದೆ,(ಏಜೆನ್ಸೀಸ್).