DMK Minister in corruption case 
ದೇಶ

DMK Minister in corruption case | ಡಿಎಂಕೆ ಸಚಿವ ನೆಹರು ಮೇಲೆ ಇಡಿ ಕೇಸ್​; ಇತ್ತ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾದ ಪುತ್ರ ಅರುಣ್ ನೆಹರು

ಚೆನ್ನೈ: ತಮಿಳುನಾಡು ಸಚಿವ ಕೆ ಎನ್ ನೆಹರು ಪುತ್ರ, ಡಿಎಂಕೆ ಸಂಸದ ಅರುಣ್ ನೆಹರು ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಿದ್ದು, ಇತ್ತ ಜಾರಿ ನಿರ್ದೇಶನಾಲಯ ಸಚಿವ ನೆಹರುಗೆ ಸಂಬಂಧಿಸಿದ 1,020 ಕೋಟಿ ರೂ.ಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಹಿತಿ ಕೋರಿದ ಕೆಲವೇ ದಿನಗಳಲ್ಲಿ ಈ ಭೇಟಿ ನಡೆದಿರುವುದು ರಾಜಕೀಯ ವಲಯದಲ್ಲಿ ಹೊಸದೊಂದು ಚರ್ಚೆ ಹುಟ್ಟು ಹಾಕಿದೆ.
ಪುರಸಭೆ ಆಡಳಿತ ಮತ್ತು ನೀರು ಸರಬರಾಜು ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಲಂಚ ಮತ್ತು ಟೆಂಡರ್ ಫಿಕ್ಸಿಂಗ್ ಕುರಿತು ನಡೆಯುತ್ತಿರುವ ತನಿಖೆಯ ಮಧ್ಯೆ ಈ ಸಭೆ ನಡೆದಿದೆ.
ಈ ಸಭೆಯ ಸಮಯದಲ್ಲಿ ಅರುಣ್ ನೆಹರು ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಗೆ ಸಂಬಂಧಿಸಿದ ಗ್ರಾಹಕ ಸಂರಕ್ಷಣಾ ಕಾನೂನುಗಳಿಗೆ ತುರ್ತು ತಿದ್ದುಪಡಿಗಳನ್ನು ಕೋರಿ ಪತ್ರವನ್ನು ಸಲ್ಲಿಸಿದ್ದಾರೆ ಎನ್ನಲಾಗಿದ್ದು, ದೇಶದಾದ್ಯಂತ ಸಾಲಗಾರರಿಗೆ ನ್ಯಾಯಯುತತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಅಗತ್ಯವನ್ನು ಈ ವೇಳೆ ಉಲ್ಲೇಖಿಸಿದ್ದಾರೆ. ಪಿಎಸಿಎಲ್ ಲಿಮಿಟೆಡ್ ಹಗರಣದಲ್ಲಿ ತಮ್ಮ ಉಳಿತಾಯವನ್ನು ಕಳೆದುಕೊಂಡ ಸಾವಿರಾರು ಕುಟುಂಬಗಳು, ವಿಶೇಷವಾಗಿ ದುರೈಯೂರ್‌ನ ಮಹಿಳೆಯರು ಅನುಭವಿಸಿದ ಆರ್ಥಿಕ ನಷ್ಟವನ್ನು ತ್ವರಿತವಾಗಿ ಪರಿಹರಿಸುವಂತೆ ಕೋರಿ ಸಂಸದ ಅರುಣ್​ ಪ್ರತ್ಯೇಕ ಪತ್ರವನ್ನು ನೀಡಿದ್ದಾರೆ
ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಕೆ.ಎನ್. ನೆಹರು ತಿರಸ್ಕರಿಸಿದ್ದು, ಜಾರಿ ನಿರ್ದೇಶನಾಲಯವು ತಮ್ಮ ಮಾನಹಾನಿ ಮಾಡುವ ಗುರಿಯೊಂದಿಗೆ ಈ ರೀತಿ ನಡೆದುಕೊಳ್ಳುತ್ತಿದೆ ಎಂದಿದ್ದಾರೆ. MAWS ಕಾಮಗಾರಿಗಳ ಒಪ್ಪಂದದ ಮೌಲ್ಯದ ಶೇ.7.5 ರಿಂದ 10 ರಷ್ಟನ್ನು ಡಿಎಂಕೆ ಸಚಿವರ ಆಪ್ತರು ಪಕ್ಷದ ನಿಧಿಯಾಗಿ ಸಂಗ್ರಹಿಸಿದ್ದಾರೆ ಎಂದು ಇಡಿ ತನ್ನ ಪತ್ರದಲ್ಲಿ ತಿಳಿಸಿದೆ. ಈ ಪ್ರಕರಣದ ವಿಷಯವಾಗಿ ಎಫ್‌ಐಆರ್ ದಾಖಲಿಸಲು ಸಾಧ್ಯವಾಗದಿದ್ದರೆ ಆರೋಪಿಗಳಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದೆ.
ಲಂಚ ಮತ್ತು ಟೆಂಡರ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸಚಿವ ನೆಹರು, ನಾನು ಈ ಆರೋಪವನ್ನು ಕಾನೂನಿನ ಪ್ರಕಾರವೇ ಎದುರಿಸುತ್ತೇನೆ, ಡಿಎಂಕೆ ಸರ್ಕಾರದ ಸಾಧನೆಗಳನ್ನು ಸಹಿಸದೆ ನನ್ನನ್ನು ನಿರಂತರವಾಗಿ ಗುರಿಯಾಗಿಸಿಕೊಂಡು ಅವಮಾನ ಮಾಡುತ್ತಿರುವ ವಿರೋಧ ಪಕ್ಷಗಳ ಸಾಲಿಗೆ ಇಡಿ ಕೂಡ ಸೇರಿಕೊಂಡಿದೆ ಎಂದು ಹೇಳಿದ್ದಾರೆ(ಏಜೆನ್ಸೀಸ್​).