Dharmendra Pradhan-Amit Shah Meeting | ಅಮಿತ್ ಷಾ ಕಚೇರಿಯಲ್ಲಿ ನಡೆದ ಸಭೆಯ ಫಲಿತಾಂಶವೇನು..? (ಸಂಗ್ರಹ ಚಿತ್ರ)
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿನಿಧಿಗಳು ಹಾಗೂ ಕೇಂದ್ರ ಸಚಿವ ಜೆ ಪಿ ನಡ್ಡಾ ನಡುವಿನ ಮಹತ್ವದ ಭೇಟಿಯ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಷಾ ಕಚೇರಿಯಲ್ಲಿ ಉನ್ನತ ಮಟ್ಟದ ತುರ್ತು ಸಭೆ (Dharmendra Pradhan-Amit Shah Meeting) ನಡೆದಿದ್ದು, ಈ ಸಭೆಯಲ್ಲಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್ ಮತ್ತು ಕಿರಣ್ ರಿಜಿಜು ಭಾಗವಹಿಸಿದ್ದರು ಎನ್ನಲಾಗಿದೆ. ಸಭೆ ಮುಕ್ತಾಯಗೊಂಡಿದೆಯಾದರೂ, ಪ್ರತಿಭಟನಾಕಾರರ ಪ್ರಮುಖ ಆಗ್ರಹವಾದ ಶಿಕ್ಷಣ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆಯೇ? ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.
ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಕೇಂದ್ರ ಸಚಿವ ಜೆ ಪಿ ನಡ್ಡಾ ಅವರನ್ನು ಭೇಟಿಯಾಗಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದ ಬೆನ್ನಲ್ಲೇ ಈ ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆ ನಡೆದಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ವಕ್ತಾರ ಸೌರವ್ ದಾಸ್, ನಾನು ಮತ್ತು ಅಶುತೋಷ್ ರಾಂಕಾ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರನ್ನು ಭೇಟಿಯಾದೆವು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣದ ರಾಜೀನಾಮೆ ಅಥವಾ ವಜಾ ಸೇರಿದಂತೆ ನಮ್ಮ ಪ್ರಮುಖ ಬೇಡಿಕೆಗಳನ್ನು ಅವರಿಗೆ ತಲುಪಿಸಿದ್ದೇವೆ. ನಾವು ಈಗ ಸರ್ಕಾರದ ಮುಂದಿನ ಕ್ರಮಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
1 ಕೋಟಿ ಪರಿಹಾರಕ್ಕೆ ಸಿಜೆಪಿ ಆಗ್ರಹ
ಮತ್ತೊಂದೆಡೆ, ದೆಹಲಿಯಲ್ಲಿ ನಡೆದ ಭಾರಿ ಪ್ರತಿಭಟನೆಯ ವೇಳೆ ದೊಡ್ಡ ಸಂಖ್ಯೆಯ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ ಅಶುತೋಷ್ ರಾಂಕಾ, ಸಿಜೆಪಿಯ ಬೇಡಿಕೆಗಳ ಕುರಿತು ಬಿಜೆಪಿ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಜೆ ಪಿ ನಡ್ಡಾ ಅವರು ಕಾಲಾವಕಾಶ ಕೋರಿದ್ದಾರೆ ಎಂದು ತಿಳಿಸಿದ್ದಾರೆ. ಸಿಜೆಪಿ ಸಲ್ಲಿಸಿರುವ ಮನವಿಯಲ್ಲಿ, ಸಮಾಜ ಸೇವಕ ಸೋನಮ್ ವಾಂಗ್ಚುಕ್ ಅವರ ತಕ್ಷಣದ ಬಿಡುಗಡೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಹಾಗೂ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾದ ನೀಟ್ (NEET) ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ಪರಿಹಾರ ನೀಡಬೇಕು ಎಂಬ ಪ್ರಮುಖ ಆಗ್ರಹಗಳಿವೆ.
ಪಕ್ಷದ ಬೇಡಿಕೆಗಳನ್ನು ಪುನರುಚ್ಚರಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ನಮ್ಮ ಬೇಡಿಕೆಗಳು ತುಂಬಾ ಸ್ಪಷ್ಟವಾಗಿವೆ. ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ಪರಿಹಾರ ಸಿಗಬೇಕು. ಹಾಗೆಯೇ ಸೋನಮ್ ವಾಂಗ್ಚುಕ್ರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನೀಟ್-ಯುಜಿ ಅಕ್ರಮ ಖಂಡಿಸಿ ತೀವ್ರ ಪ್ರತಿಭಟನೆ
ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸಿ ಸಿಜೆಪಿ ಬೆಂಬಲಿಗರು ನಡೆಸಿದ ಸಂಸದ್ ಚಲೋ ಪ್ರತಿಭಟನೆಯಿಂದಾಗಿ ಇಡೀ ದಿನ ದೆಹಲಿಯಲ್ಲಿ ತೀವ್ರ ಉದ್ವಿಗ್ನ ವಾತಾವರಣ ನೆಲೆಸಿತ್ತು. ಪ್ರತಿಭಟನಾಕಾರರು ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದಾಗ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಅವರನ್ನು ತಡೆದರು.
ನೀಟ್-ಯುಜಿ ಪರೀಕ್ಷಾ ಅಕ್ರಮ ಮಾತ್ರವಲ್ಲದೆ, ಸಿಬಿಎಸ್‌ಇ 12 ನೇ ತರಗತಿ ಮಂಡಳಿ ಪರೀಕ್ಷೆಗಳ ಕುರಿತಾದ ಅಕ್ರಮಗಳನ್ನು ಖಂಡಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆದಿತ್ತು(ಏಜೆನ್ಸೀಸ್).