West Bengal | ವರ್ಷಗಳ ಕಾಲ ಮುಚ್ಚಿದ್ದ ಅಸನ್ಸೋಲ್ ದುರ್ಗಾ ಮಂದಿರ ರೀ ಓಪನ್
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ಐತಿಹಾಸಿಕ ಜಯ ದಾಖಲಿಸಿ ಅಧಿಕಾರ ಹಿಡಿಯುತ್ತಿದ್ದಂತೆಯೇ, ಅಲ್ಲಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ವಾತಾವರಣದಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದ್ದು, ಇದಕ್ಕೆ ಪೂರಕವೆಂಬಂತೆ, ಹಲವಾರು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಪಶ್ಚಿಮ ಬಂಗಾಳದ ಶ್ರೀ ದುರ್ಗಾಮಾತಾ ಚಾರಿಟೇಬಲ್ ಟ್ರಸ್ಟ್ ನಿರ್ವಹಣೆಯ ದುರ್ಗಾ ದೇವಾಲಯವನ್ನು ಈಗ ಭಕ್ತರಿಗಾಗಿ ಪುನಃ ತೆರೆಯಲಾಗಿದೆ.
ದೀರ್ಘ ಕಾಲದ ಬಳಿಕ ಈ ದೇವಾಲಯದ ಬಾಗಿಲು ತೆರೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಸಂತಸ ತಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರು ಈ ಬೆಳವಣಿಗೆಯನ್ನು ರಾಜ್ಯದಲ್ಲಿ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಸಂಕೇತವೆಂದು ಬಣ್ಣಿಸಿದ್ದು, ಅಸನ್ಸೋಲ್ ದಕ್ಷಿಣ ಕ್ಷೇತ್ರದಲ್ಲಿ 40,839 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿರುವ ಅಗ್ನಿಮಿತ್ರ ಪಾಲ್ ಈ ದೇವಾಲಯದ ಪುನರಾರಂಭದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದೇವಾಲಯದ ಸಮಿತಿಯ ಸದಸ್ಯೆಯೂ ಆಗಿರುವ ಬಿಜೆಪಿ ನಾಯಕಿ ನಿಲು ಚಕ್ರವರ್ತಿ ಮಾತನಾಡಿ, ಈ ಹಿಂದೆ ದೇವಾಲಯದ ಪ್ರವೇಶಕ್ಕೆ ನಿರ್ಬಂಧವಿತ್ತು ಮತ್ತು ಕೇವಲ ಹಬ್ಬಗಳ ಸಮಯದಲ್ಲಿ ಮಾತ್ರ ತೆರೆಯಲಾಗುತ್ತಿತ್ತು. ಈ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಹಲವು ಬಾರಿ ಮನವಿ ಮಾಡಲಾಗಿತ್ತು. ಈಗ ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದರಿಂದ ದೇವಾಲಯದ ಪುನರಾರಂಭ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಅಸನ್ಸೋಲ್ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕೃಷ್ಣೇಂದು ಮುಖರ್ಜಿ ಅವರು, ತಾವು ಗೆದ್ದರೆ ದೇವಾಲಯವು ವರ್ಷವಿಡೀ ಭಕ್ತರಿಗಾಗಿ ತೆರೆದಿರುವಂತೆ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೇ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ. ಈ ಭೇಟಿಯು ದೇವಾಲಯದ ಅಧಿಕೃತ ಪುನರಾರಂಭವನ್ನು ಸೂಚಿಸುತ್ತಿದ್ದು, ಸ್ಥಳೀಯರು ಇದನ್ನು ಕೇವಲ ಧಾರ್ಮಿಕ ವಿಚಾರವಾಗಿ ಮಾತ್ರವಲ್ಲದೆ, ರಾಜ್ಯದ ರಾಜಕೀಯ ಬದಲಾವಣೆಯ ಪ್ರತಿಬಿಂಬವಾಗಿ ನೋಡುತ್ತಿದ್ದಾರೆ.
ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಎರಡರಷ್ಟು ಬಹುಮತದೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ. ಈ ಫಲಿತಾಂಶವು ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಸುದೀರ್ಘ ಆಳ್ವಿಕೆಯನ್ನು ಕೊನೆಗಾಣಿಸಿದ್ದು, ಸ್ವತಃ ಮಮತಾ ಬ್ಯಾನರ್ಜಿ ಅವರೇ ಭಬಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿರುವುದು ಮತದಾರರ ಬದಲಾದ ಮನಸ್ಥಿತಿಗೆ ಸಾಕ್ಷಿಯಾಗಿದೆ. ದಶಕಗಳ ಬಳಿಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ರಾಜ್ಯದಲ್ಲಿಯೂ ಆಡಳಿತ ನಡೆಸಲಿರುವುದು ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಅಭಿಯಾನಕ್ಕೆ ಮತ್ತಷ್ಟು ಬಲ ತಂದಿದೆ(ಏಜೆನ್ಸೀಸ್).