ಸಿಎಂ ಮೋಹನ್ ಯಾದವ್ 
ದೇಶ

ಅಸ್ಸಾಂ ಬಳಿಕ ಮಧ್ಯಪ್ರದೇಶದಲ್ಲೂ ಯುಸಿಸಿ ಜಾರಿಗೆ ಸಿದ್ದತೆ: ಸಾರ್ವಜನಿಕರ ಸಲಹೆ ಕೇಳಿದ ಸಿಎಂ ಮೋಹನ್ ಯಾದವ್ | CM Mohan Yadav

ಭೋಪಾಲ್: ಅಸ್ಸಾಂ ಬಳಿಕ ಮಧ್ಯಪ್ರದೇಶದಲ್ಲೂ ಯುಸಿಸಿ ಜಾರಿಗೆ ತರಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದ್ದು, ಸಿಎಂ ಮೋಹನ್ ಯಾದವ್(CM Mohan Yadav) ಶೀಘ್ರದಲ್ಲೇ ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಅನ್ನು ಜಾರಿಗೆ ತರುವುದಾಗಿ ಘೋಷಿಸಿದ್ದು, ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಈ ಕುರಿತು ಸೋಮವಾರ(ಜೂ. 01) ಮಾತನಾಡಿರುವ ಅವರು, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ಆರು ಸದಸ್ಯರ ಸಮಿತಿಯು ರಾಜ್ಯದಲ್ಲಿ ಯುಸಿಸಿ ಅನುಷ್ಠಾನಗೊಳಿಸುವ ಕುರಿತು ಧಾರ್ಮಿಕ ಮುಖಂಡರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಿದೆ ಎಂದು ಹೇಳಿದ್ದಾರೆ.
ಮಹಿಳೆಯರು ಒಳಗೊಂಡ ವಿಚ್ಛೇದನ ಪ್ರಕರಣಗಳಾಗಲಿ, ಕೌಟುಂಬಿಕ ಸಂಪ್ರದಾಯಗಳಾಗಲಿ ಅಥವಾ ವಿವಿಧ ಧಾರ್ಮಿಕ ಆಚರಣೆಗಳಾಗಲಿ, ಕಾನೂನು ಮತ್ತು ಸಾಮಾಜಿಕ ಭಿನ್ನತೆಯ ಅಗತ್ಯವಿಲ್ಲ. ಎಲ್ಲರೂ ಯುಸಿಸಿ ಕಡೆ ಸಾಗಬೇಕು. ಹೊಸದಾಗಿ ಪ್ರಾರಂಭಿಸಲಾದ ಆನ್‌ಲೈನ್ ಸಮಾಲೋಚನಾ ಪೋರ್ಟಲ್​ ಮೂಲಕ ಸಾರ್ವಜನಿಕರು ತಮ್ಮ ಸಲಹೆಗಳನ್ನು ಹಂಚಿಕೊಳ್ಳಬೇಕೆಂದು ನಾನು ಮನವಿ ಮಾಡ್ತೀನಿ ಎಂದಿದ್ದಾರೆ.
ಉತ್ತರಾಖಂಡ ಮತ್ತು ಗುಜರಾತ್‌ನಂತಹ ರಾಜ್ಯಗಳು ಈಗಾಗಲೇ ಈ ಸಂಹಿತೆಗಾಗಿ ಚೌಕಟ್ಟುಗಳನ್ನು ಅಳವಡಿಸಿಕೊಂಡಿವೆ. ಮತ್ತು ಮಧ್ಯಪ್ರದೇಶ ಕೂಡ ಇದನ್ನು ಅನುಸರಿಸುತ್ತದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರಂಜನಾ ಪ್ರಸಾದ್ ದೇಸಾಯಿ ನೇತೃತ್ವದ ಸಮಿತಿಯು ಪ್ರಸ್ತುತ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಎಲ್ಲಾ ಸಮುದಾಯಗಳ ಪಾಲುದಾರರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಸಮಿತಿ ಎಲ್ಲಾ ವರದಿ ಸಂಗ್ರಹಿಸಿದ ಬಳಿಕ ಕರಡು ಮಸೂದೆಯನ್ನು ಸಲ್ಲಿಸದೆ. ಬಳಿಕ ರಾಜ್ಯ ಸರ್ಕಾರವು ಸಾಧ್ಯವಾದಷ್ಟು ಬೇಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಕ್ರಮಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).