ಹರಿಯಾಣ: ( daughter) 10 ಹೆಣ್ಣು ಮಕ್ಕಳಿರುವ ಹರಿಯಾಣದ ಸಿರ್ಸಾ ಜಿಲ್ಲೆಯ ದಂಪತಿ ಈಗ 11ನೇ ಮಗುವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ತಾಯಿಯ ಆರೋಗ್ಯದ ಅಪಾಯಗಳು ಮತ್ತು ಗಂಡು ಮಕ್ಕಳ ಮೇಲಿನ ವ್ಯಾಮೋಹ ಹಾಗೂ ಆದ್ಯತೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
37 ವರ್ಷದ ಮಹಿಳೆ ಮತ್ತು ದಿನಗೂಲಿ ಕಾರ್ಮಿಕರಾಗಿರುವ ಆಕೆಯ ಪತಿ ಸಂಜಯ್ ಕುಮಾರ್ 19 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಈ ದಂಪತಿಗೆ 10 ಜನ ಹೆಣ್ಣು ಮಕ್ಕಳಿದ್ದಾರೆ. ಆದರೆ ಜಿಂದ್ ಜಿಲ್ಲೆಯ ಉಚನಾ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಈ ವಾರದ ಆರಂಭದಲ್ಲಿ 11ನೇ ಮಗು ಜನಿಸಿತ್ತು. ಇದು ಹೆಚ್ಚಿನ ಅಪಾಯದ ಹೆರಿಗೆಯಾಗಿತ್ತು. ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಓಜಾಸ್ ಆಸ್ಪತ್ರೆ ವೈದ್ಯರಾದ ಡಾ. ನರವೀರ್ ಶಿಯೋರನ್ ಹೇಳಿದ್ದಾರೆ.
ಈಗಾಗಲೇ ಹತ್ತು ಮಂದಿ ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗೆ 11ನೇ ಮಗುವಾಗಿ ಗಂಡು ಮಗು ಜನಿಸಿದೆ. ಗಂಡು ಮಗುವಿಗಾಗಿ ಹಂಬಲಿಸಿ ಇಷ್ಟೊಂದು ಮಕ್ಕಳನ್ನು ಪಡೆದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ತಂದೆ ಗುರ್ಮೀತ್ ಸಿಂಗ್, ನಮಗೆ ಒಬ್ಬ ಗಂಡು ಮಗು ಬೇಕು ಎಂದು ತುಂಬಾ ಆಸೆ ಇತ್ತು ಮತ್ತು ನನ್ನ ಹೆಣ್ಣುಮಕ್ಕಳಿಗೂ ಒಬ್ಬ ತಮ್ಮ ಬೇಕು ಎಂದು ಆಸೆ ಇತ್ತು. ನನ್ನ ಕಡಿಮೆ ಆದಾಯದಲ್ಲಿ, ನನ್ನ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇನೆ. ಏನೇ ನಡೆದರೂ ಅದು ದೇವರ ಇಚ್ಛೆಯಾಗಿದೆ. ನಾನು ಅದರಲ್ಲಿ ಸಂತೋಷವಾಗಿದ್ದೇನೆ ಎಂದಿದ್ದಾರೆ.
ಪಿತೃಪ್ರಧಾನ ವ್ಯವಸ್ಥೆ ಅಥವಾ ಗಂಡು ಮಗುವಿನ ವ್ಯಾಮೋಹ ಹೊಂದಿಲ್ಲ. ಮಕ್ಕಳನ್ನು ತಾನು ದೇವರ ಕೊಡುಗೆ ಎಂದು ಭಾವಿಸುತ್ತೇನೆ. ಹತ್ತು ಹೆಣ್ಣು ಮಕ್ಕಳ ನಂತರ ಮಗ ಹುಟ್ಟಿರುವುದು ಕುಟುಂಬದಲ್ಲಿ ಸಂತೋಷ ತಂದಿದೆಯೇ ಹೊರತು, ಇದು ಕೇವಲ ಗಂಡು ಮಗುವಿಗಾಗಿ ಮಾಡಿದ ಹಠವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಗುವಿನ ಜನನದ ನಂತರ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ನೆರೆಹೊರೆಯವರು ದಂಪತಿಗಳಿಗೆ ಶುಭ ಹಾರೈಸುತ್ತಿದ್ದಾರೆ.
ಈ ಸುದ್ದಿ ಹೊರಬರುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಕುಟುಂಬದ ಸಂತೋಷದಲ್ಲಿ ಭಾಗಿಗಳಾಗಿದ್ದರೆ, ಇನ್ನು ಕೆಲವರು ಇಂದಿನ ಕಾಲದಲ್ಲಿ ಜನಸಂಖ್ಯಾ ನಿಯಂತ್ರಣದ ಅಗತ್ಯತೆ ಮತ್ತು ಇಷ್ಟು ದೊಡ್ಡ ಕುಟುಂಬವನ್ನು ನಿರ್ವಹಿಸುವ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.