ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ 
ದೇಶ

P Chidambaram | ಮಸೂದೆಗಳ ಶೀರ್ಷಿಕೆಯಲ್ಲಿ ಹಿಂದಿ ಪದ ಬಳಕೆ; ಹಿಂದಿಯೇತರ ಜನರಿಗೆ ಮಾಡಿದ ಅವಮಾನ ಎಂದು ಚಿದಂಬರಂ ಕಿಡಿ

ದೆಹಲಿ: ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಗಳ ಶೀರ್ಷಿಕೆಯಲ್ಲಿ ಹಿಂದಿ ಪದಗಳ ಬಳಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ವಿರೋಧಿಸಿದ್ದು, ಇದು ಹಿಂದಿಯೇತರ ಜನರಿಗೆ ಅವಮಾನ ಎಂದು ಕರೆದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಚಿದಂಬರಂ, ಸಂಸತ್ತಿನಲ್ಲಿ ಪರಿಚಯಿಸಲಾಗುವ ಮಸೂದೆಗಳ ಶೀರ್ಷಿಕೆಯಲ್ಲಿ ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾದ ಹಿಂದಿ ಪದಗಳ ಬಳಕೆ ಹೆಚ್ಚುತ್ತಿರುವ ಅಭ್ಯಾಸವನ್ನು ನಾನು ವಿರೋಧಿಸುತ್ತೇನೆ. ಇಲ್ಲಿಯವರೆಗೆ, ಮಸೂದೆಯ ಶೀರ್ಷಿಕೆಯನ್ನು ಇಂಗ್ಲಿಷ್ ಆವೃತ್ತಿಯಲ್ಲಿ ಇಂಗ್ಲಿಷ್ ಪದಗಳಲ್ಲಿ ಮತ್ತು ಮಸೂದೆಯ ಹಿಂದಿ ಆವೃತ್ತಿಯಲ್ಲಿ ಹಿಂದಿ ಪದಗಳಲ್ಲಿ ಬರೆಯುವ ಪದ್ಧತಿ ಇತ್ತು ಎಂದು ಬರೆದುಕೊಂಡಿದ್ದಾರೆ.
75 ವರ್ಷಗಳ ಈ ಪದ್ಧತಿಯಲ್ಲಿ ಯಾರೂ ಯಾವುದೇ ಆಕ್ಷೇಪಣೆ ಎತ್ತದಿದ್ದಾಗ ಸರ್ಕಾರ ಏಕೆ ಈ ಬದಲಾವಣೆ ಮಾಡಬೇಕು? ಇದು ಹಿಂದಿಯೇತರ ಭಾಷಿಕರಿಗೆ ಮತ್ತು ಹಿಂದಿ ಹೊರತುಪಡಿಸಿ ಬೇರೆ ಅಧಿಕೃತ ಭಾಷೆ ಹೊಂದಿರುವ ರಾಜ್ಯಗಳಿಗೆ ಮಾಡಿದ ಅವಮಾನವಾಗಿದೆ ಎಂದರು. ಹಿಂದಿಯೇತರ ಜನರು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾದ ಹಿಂದಿ ಪದಗಳಲ್ಲಿರುವ ಶೀರ್ಷಿಕೆಗಳೊಂದಿಗೆ ಮಸೂದೆಯನ್ನು ಗುರುತಿಸಲು ಸಾಧ್ಯವಿಲ್ಲ ಮತ್ತು ಅದರ ಶೀರ್ಷಿಕೆಯನ್ನು ಉಚ್ಚರಿಸಲು ಸಾಧ್ಯವಿಲ್ಲ. ಈ ಹಿಂದಿನ ಸರ್ಕಾರಗಳು ಇಂಗ್ಲಿಷ್ ಸಹಾಯಕ ಅಧಿಕೃತ ಭಾಷೆಯಾಗಿ ಉಳಿಯುತ್ತದೆ ಎಂಬ ಭರವಸೆಯನ್ನು ಪುನರುಚ್ಚರಿಸಿವೆ. ಆದರೆ ಈಗ ಭರವಸೆ ಮುರಿಯುವ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬದಲಾವಣೆಗೆ ತಯಾರಾಗಿರುವ ಮಸೂದೆಗಳು- ಸಬ್ಕಾ ಬಿಮಾ, ವಿಮಾ ಕಾನೂನುಗಳನ್ನು ತಿದ್ದುಪಡಿ ಮಾಡುವ ಸಬ್ಕಿ ರಕ್ಷಾ ಮಸೂದೆ, ವಿಕ್ಷಿತ್ ಭಾರತ್ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆಯನ್ನು ಜಿ ರಾಮ್ ಜಿ ಮಸೂದೆ ಎಂದೂ ಕರೆಯುತ್ತಾರೆ ಮತ್ತು ಸುಸ್ಥಿರ ಬಳಕೆ ಮತ್ತು ಪರಮಾಣು ಶಕ್ತಿಯ ಪ್ರಗತಿ (ಶಾಂತಿ) ಮಸೂದೆ ಸೇರಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಿ ರಾಮ್ ಜಿ ಯೋಜನೆಯೊಂದಿಗೆ ಬದಲಾಯಿಸುವ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸಿದ್ದು, ಬಿಜೆಪಿಗೆ ರಾಷ್ಟ್ರಪಿತನೊಂದಿಗೆ ಏನಾದರು ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದೆ. ಜಿ ರಾಮ್ ಜಿ ಮತ್ತು ಇತರ ಯೋಜನೆಗಳ ಹೆಸರು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ತನ್ನ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಎನ್ನುವುದು ಸರ್ಕಾರದ ವಾದ(ಏಜೆನ್ಸೀಸ್).