- ಎಐ ಶಿಕ್ಷಕಿ ಸೃಷ್ಟಿಸಿದ ವಿದ್ಯಾರ್ಥಿ
- 17 ವರ್ಷದ ವಿದ್ಯಾರ್ಥಿ ಆದಿತ್ಯ ಕುಮಾರ್
- ಸೋಫಿ ಎಂಬ AI ಚಾಲಿತ ಶಿಕ್ಷಕಿಯಿಂದ ಪಾಠ
ಉತ್ತರ ಪ್ರದೇಶ: ಎಲ್ಲರಂತೆ ಸಹಪಾಠಿಗಳೊಡನೆ ತರಗತಿಯಲ್ಲಿ ಪಾಠ ಕೇಳಿ, ಆಟೋಟಗಳಲ್ಲಿ ಭಾಗವಹಿಸುತ್ತಿದ್ದ 17 ವರ್ಷದ ವಿದ್ಯಾರ್ಥಿ ಆದಿತ್ಯ ಕುಮಾರ್, ಇದೀಗ ತನ್ನ ಪ್ರತಿಭೆಯನ್ನು ಎಐ ಚಾಲಿತ ಶಿಕ್ಷಕಿಯನ್ನು ತಯಾರಿಸುವ ಮೂಲಕ ಅನಾವರಣಗೊಳಿಸಿರುವುದು ಸದ್ಯ ಹಲವರ ಮೆಚ್ಚುಗೆ, ಪ್ರಶಂಸೆಗೆ ಕಾರಣವಾಗಿದೆ.
ಕೃತಕ ಬುದ್ಧಿಮತ್ತೆ ಶಿಕ್ಷಕಿಯನ್ನು ಸೃಷ್ಟಿಸಿದ ಆದಿತ್ಯ, ಪ್ರತಿಭೆ ಅನ್ನೋದು ಯಾರೊಬ್ಬರ ಸಂಪತ್ತಲ್ಲ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾನೆ. ಉತ್ತರ ಪ್ರದೇಶದ ಬುಲಂದ್‌ಶಹರ್ ಮೂಲದ ಆದಿತ್ಯ ಕುಮಾರ್, ಸೋಫಿ ಎಂಬ ಎಐ ಆಧಾರಿತ ಶಿಕ್ಷಕಿಯನ್ನು ಕಾರ್ಯರೂಪಕ್ಕೆ ತಂದಿದ್ದಾನೆ. ತರಗತಿಯಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಹಾಗೂ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯವನ್ನು ಸೋಫಿ ಒಳಗೊಂಡಿದೆ.
ತರಗತಿಯಲ್ಲಿ ಎಐ ಟೀಚರ್ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಝಲಕ್ ನೀಡಿರುವ ಆದಿತ್ಯ, ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ಹಲವರ ಹುಬ್ಬೇರಿಸಿದೆ. ಆದಿತ್ಯ ಕುಮಾರ್ ಎಂದು ಗುರುತಿಸಲಾದ ವಿದ್ಯಾರ್ಥಿ ಶಿವ ಚರಣ್ ಇಂಟರ್ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಎಎನ್ಐ ಹಂಚಿಕೊಂಡ ವಿಡಿಯೊದಲ್ಲಿ, ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (LLM) ಚಿಪ್‌ಸೆಟ್ ಬಳಸಿ ರಚಿಸಲಾದ AI ಶಿಕ್ಷಕಿ ತನ್ನನ್ನು ತಾನೇ ಪರಿಚಯಿಸಿಕೊಂಡು, ಆದಿತ್ಯ ಕೇಳಿದ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಕುರಿತು ಮಾತನಾಡಿದ ಆದಿತ್ಯ, "ಈ ರೋಬೋಟ್ ತಯಾರಿಸಲು ನಾನು ಎಲ್ಎಲ್ಎಂ ಚಿಪ್‌ಸೆಟ್ ಬಳಸಿದ್ದೇನೆ. ಇದನ್ನು ರೋಬೋಟ್‌ಗಳನ್ನು ತಯಾರಿಸುವ ದೊಡ್ಡ ಕಂಪನಿಗಳು ಸಹ ಬಳಸುತ್ತವೆ. ಇದು ವಿದ್ಯಾರ್ಥಿಗಳ ಅನುಮಾನಗಳನ್ನು ಬಗೆಹರಿಸುತ್ತದೆ. ಸದ್ಯಕ್ಕೆ ಈ ಎಐ ರೋಬೋಟ್ ಕೇವಲ ಮಾತನಾಡುತ್ತೆ. ಆದರೆ, ಮುಂದಿನ ದಿನಗಳಲ್ಲಿ ನಾವಿದನ್ನು ಬರೆಯಲು ಕೂಡ ಸಾಧ್ಯವಾಗುವಂತೆ ರೂಪಿಸುತ್ತಿದ್ದೇವೆ" ಎಂದಿದ್ದಾರೆ,(ಏಜೆನ್ಸೀಸ್).