ಕೆ.ಸಿ.ವೇಣುಗೋಪಾಲ್ ಮತ್ತು ಪ್ರಧಾನಿ ಮೋದಿ  
ದೇಶ

ರಾಷ್ಟ್ರವನ್ನುದ್ದೇಶಿಸಿ ಭಾಷಣ; ಪ್ರಧಾನಿ ಮೋದಿ ವಿರುದ್ಧ ಲೋಕಸಭೆ ಸ್ಪೀಕರ್​ಗೆ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ ಕಾಂಗ್ರೆಸ್ | Congress

ನವದೆಹಲಿ: ಲೋಕಸಭೆಯಲ್ಲಿ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ-2026 ಅಂಗೀಕಾರಗೊಳ್ಳಲು ವಿಫಲವಾದ ಹಿನ್ನೆಲೆ ಏಪ್ರಿಲ್ 18ರಂದು ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ದೂರದರ್ಶನದಲ್ಲಿ ಮಾಡಿದ ಪ್ರಧಾನಿ ಮೋದಿಯವರ ಭಾಷಣದ ವಿರುದ್ಧ ಕಾಂಗ್ರೆಸ್​ (Congress) ಲೋಕಸಭಾ ಸ್ಪೀಕರ್​ಗೆ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದೆ.
ಡಿಡಿ ಭಾಷಣವನ್ನು ಅಧಿಕಾರದ ಸ್ಪಷ್ಟ ದುರುಪಯೋಗ ಎಂದು ಆರೋಪಿಸಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಮತ್ತು ಕೇರಳದ ಅಲಪ್ಪುಳ ಸಂಸದ ಕೆ.ಸಿ.ವೇಣುಗೋಪಾಲ್ ಮಂಗಳವಾರ(ಏ. 21) ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದ್ದಾರೆ.
ಹಕ್ಕುಚ್ಯುತಿ ನೋಟಿಸ್​ನಲ್ಲಿ, ಪ್ರತಿಪಕ್ಷಗಳನ್ನು ಟೀಕಿಸಿದ ಪ್ರಧಾನಿಯವರ ಭಾಷಣವು ಗಂಭೀರ ಹಕ್ಕು ಉಲ್ಲಂಘನೆ ಮತ್ತು ಸದನದ ತಿರಸ್ಕಾರ. ರಾಷ್ಟ್ರವನ್ನು ಉದ್ದೇಶಿಸಿ 'ಭಾಷಣ' ಎಂದು ಕರೆಯಲಾದ 29 ನಿಮಿಷಗಳ ಭಾಷಣದಲ್ಲಿ, ಪ್ರಧಾನಿಯವರು ಮಸೂದೆಯನ್ನು ತಡೆದಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಟೀಕಿಸಿದ್ದಾರೆ.
ವಿರೋಧ ಪಕ್ಷದ ಸದಸ್ಯರ ಮತದಾನದ ಮಾದರಿಯನ್ನು ನೇರವಾಗಿ ಉಲ್ಲೇಖಿಸಿ, ಅವರ ಉದ್ದೇಶಗಳ ಬಗ್ಗೆ ಟೀಕಿಸಿದ್ದಾರೆ. ಸರ್ಕಾರವು ಸಂಸತ್ತಿನಲ್ಲಿ ಅಗತ್ಯವಾದ ಬಹುಮತವನ್ನು ಸಂಗ್ರಹಿಸಲು ಸಾಧ್ಯವಾಗದ ಬಗ್ಗೆ ಪ್ರಧಾನಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು ತಪ್ಪು, ಅನೈತಿಕ ಹಾಗೂ ಅಧಿಕಾರದ ಸ್ಪಷ್ಟ ದುರಪಯೋಗ. ದೇಶದ ಅತ್ಯುನ್ನತ ಹುದ್ದೆ ಹೊಂದಿದ ವ್ಯಕ್ತಿಯ ಇಂತಹ ಹೇಳಿಕೆಗಳು ಗಂಭೀರವಾದ ಸವಲತ್ತು ಉಲ್ಲಂಘನೆ ಮತ್ತು ಸದನದ ತಿರಸ್ಕಾರವಾಗಿದೆ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ಈ ಕುರಿತು ಎಕ್ಸ್​ನಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ಜೈರಾಮ್ ರಾಮೇಶ್, ಹಾಲಿ ಪ್ರಧಾನಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣವು ಯಾವಾಗಲೂ ರಾಷ್ಟ್ರೀಯ ಏಕತೆ ಮತ್ತು ವಿಶ್ವಾಸ ವೃದ್ಧಿಯ ಪ್ರಮುಖ ಉದ್ದೇಶಕ್ಕಾಗಿ ಮೀಸಲಾಗಿರುತ್ತದೆ. ಆದರೆ ಈ ಭಾಷಣದಲ್ಲಿ ಪ್ರಧಾನ ಮಂತ್ರಿಯವರ ಪಕ್ಷಪಾತದ ಬಗ್ಗೆ ಇರುವ ನಿರ್ಲಜ್ಜ ಹೇಳಿಕೆ, ಕಾಂಗ್ರೆಸ್ ಪಕ್ಷದ ಮೇಲೆ 59 ವಿಭಿನ್ನ ಹೇಳಿಕೆಯ ದಾಳಿಯನ್ನೊಳಗೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).