ಸಿಎಂ ವಿಜಯ್‌ಗೆ ನಟಿ ತ್ರಿಶಾ ಸ್ಪೆಷಲ್’ ಬರ್ತ್‌ಡೇ ವಿಶ್: ವದಂತಿಗಳಿಗೆ ಬ್ರೇಕ್ ಹಾಕಿದ ಆ ಒಂದು ರೋಮ್ಯಾಂಟಿಕ್ ಫೋಟೋ!
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಕಾಲಿವುಡ್‌ನ ಸೂಪರ್‌ಸ್ಟಾರ್ ನಟ ದಳಪತಿ ವಿಜಯ್ ಅವರ 52ನೇ ಜನ್ಮದಿನದ ಸಂಭ್ರಮಕ್ಕೆ ಕೊನೆಗೂ ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ (Trisha wishes Vijay birthday) ಅತ್ಯಂತ ರೋಮ್ಯಾಂಟಿಕ್ ಶೈಲಿಯಲ್ಲಿ ಶುಭ ಕೋರಿದ್ದಾರೆ. ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ಅವರಿಬ್ಬರ ಮುನಿಸಿನ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಗಾಳಿಸುದ್ದಿ ಹಾಗೂ ಊಹಾಪೋಹಗಳಿಗೆ ಈ ಒಂದು ಪೋಸ್ಟ್ ಮೂಲಕ ತ್ರಿಶಾ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.
ವಿಜಯ್ ಅವರೊಂದಿಗೆ ಇರುವ ಅತ್ಯಂತ ಆಪ್ತವಾದ ಫೋಟೋವೊಂದನ್ನು ಹಂಚಿಕೊಂಡಿರುವ ತ್ರಿಶಾ, ನನ್ನ ಬದುಕಿನ ಪ್ರತಿಯೊಂದು ಹೋರಾಟಕ್ಕೂ ಅತ್ಯಮೂಲ್ಯ ಅರ್ಥ ತಂದುಕೊಡುವ ಆ ವಿಶೇಷ ವ್ಯಕ್ತಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.
ಫ್ಯಾನ್ಸ್ ವಲಯದಲ್ಲಿ ಆತಂಕ ಮೂಡಿಸಿದ್ದ ‘ವಿಶ್’ ವಿಳಂಬ!
ಪ್ರತಿ ವರ್ಷ ಜೂನ್ 22ರಂದು ವಿಜಯ್ ಹುಟ್ಟುಹಬ್ಬಕ್ಕೆ ಮರೆಯದೇ ತಡರಾತ್ರಿಯೇ ಶುಭ ಕೋರುತ್ತಿದ್ದ ತ್ರಿಶಾ, ಈ ಬಾರಿ ಇಡೀ ದಿನ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಇದರಿಂದ ಗಾಬರಿಯಾದ ವಿಜಯ್-ತ್ರಿಶಾ ಅಭಿಮಾನಿಗಳು, ಇಬ್ಬರ ನಡುವೆ ಏನೋ ಸರಿಯಿಲ್ಲ ಎಂಬ ಚರ್ಚೆ ಆರಂಭಿಸಿದ್ದರು.
ಅಷ್ಟೇ ಅಲ್ಲದೆ, ತ್ರಿಶಾ ಅವರು ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘ಅನ್‌ಫಾಲೋ’ ಮಾಡಿದ್ದಾರೆ ಎಂಬ ವದಂತಿ ಕೂಡ ಹರಡಿತ್ತು. ಆದರೆ ತಡವಾಗಿಯಾದರೂ ವಿಜಯ್ ಅವರೊಂದಿಗೆ ಕೇಕ್ ಕತ್ತರಿಸುತ್ತಿರುವ ಸುಂದರವಾದ ಕ್ಯಾಂಡಿಡ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತ್ರಿಶಾ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಫೋಟೋದಲ್ಲಿ ವಿಜಯ್ ಗುಲಾಬಿ ಬಣ್ಣದ ದೊಡ್ಡ ಕೇಕ್ ಮುಂದೆ ನಿಂತು ನಗುತ್ತಿದ್ದರೆ, ತ್ರಿಶಾ ಕೌಂಟರ್‌ನ ಮತ್ತೊಂದು ಬದಿಯಿಂದ ಅವರನ್ನು ಪ್ರೀತಿಯಿಂದ ನೋಡುತ್ತಿರುವುದು ಕಾಣಿಸುತ್ತಿದೆ.
ಎರಡು ದಶಕಗಳ ಸೂಪರ್ ಹಿಟ್ ಜೋಡಿ!
ವಿಜಯ್ ಮತ್ತು ತ್ರಿಶಾ ಜೋಡಿಗೆ ತಮಿಳು ಚಿತ್ರರಂಗದಲ್ಲಿ ಅಪಾರ ಕ್ರೇಜ್ ಇದೆ. ಇವರಿಬ್ಬರ ಸ್ನೇಹ ಇಂದಿನದಲ್ಲ, ಬರೋಬ್ಬರಿ 22 ವರ್ಷಗಳಷ್ಟು ಹಳೆಯದು. 2004ರಲ್ಲಿ ತೆರೆಕಂಡ ಸೂಪರ್ ಹಿಟ್ ‘ಗಿಲ್ಲಿ’ ಸಿನಿಮಾದಲ್ಲಿ ಇವರಿಬ್ಬರು ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಬ್ಲಾಕ್‌ಬಸ್ಟರ್ ಆದ ಬೆನ್ನಲ್ಲೇ ಕಾಲಿವುಡ್‌ನ ಬೆಸ್ಟ್ ಆನ್-ಸ್ಕ್ರೀನ್ ಜೋಡಿಯಾಗಿ ಗುರುತಿಸಿಕೊಂಡರು. ನಂತರ ತಿರುಪಾಚಿ, ಆತಿ, ಕುರುವಿ ಮತ್ತು ಇತ್ತೀಚಿನ ಲಿಯೋ ಸಿನಿಮಾಗಳಲ್ಲೂ ಇವರ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು.
ಮಧ್ಯೆ ಕೆಲವು ವರ್ಷಗಳ ಕಾಲ ಇಬ್ಬರ ನಡುವೆ ಮನಸ್ತಾಪ ಇತ್ತು ಎಂಬ ಸುದ್ದಿಯಿತ್ತಾದರೂ, ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಸಿನಿಮಾ ಮೂಲಕ 14 ವರ್ಷಗಳ ನಂತರ ಮತ್ತೆ ಒಂದಾಗಿ ಅಭಿಮಾನಿಗಳನ್ನು ರಂಜಿಸಿದ್ದರು.
ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಇವರ ಸಂಬಂಧ!
ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ತ್ರಿಶಾ ಅವರ ವೈಯಕ್ತಿಕ ಜೀವನದ ಸಮೀಕರಣಗಳು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಒಳಗಾಗುತ್ತಿವೆ. ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ 26 ವರ್ಷಗಳ ದಾಂಪತ್ಯ ಜೀವನ ವಿಚ್ಛೇದನದ ಹಂತ ತಲುಪಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಈ ಜೋಡಿ ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮದುವೆ ರಿಸೆಪ್ಷನ್‌ನಲ್ಲಿ ಇಬ್ಬರೂ ಒಟ್ಟಿಗೆ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ, ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನ (ಅದೇ ದಿನ ತ್ರಿಶಾ ಹುಟ್ಟುಹಬ್ಬವೂ ಆಗಿತ್ತು) ತ್ರಿಶಾ ಅವರು ವಿಜಯ್ ನಿವಾಸದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲೂ ವಿಐಪಿ ಗ್ಯಾಲರಿಯಲ್ಲಿ ತ್ರಿಶಾ ಮುಂಚೂಣಿಯಲ್ಲಿ ಹಾಜರಿದ್ದು ಗಮನ ಸೆಳೆದಿದ್ದರು. ತಮ್ಮ ಸಂಬಂಧದ ಬಗ್ಗೆ ಇಬ್ಬರೂ ಎಲ್ಲೂ ಬಹಿರಂಗವಾಗಿ ತುಟಿ ಬಿಚ್ಚದಿದ್ದರೂ, ಈಗ ತ್ರಿಶಾ ಹಾಕಿರುವ ಬರ್ತ್‌ಡೇ ಪೋಸ್ಟ್ ಮಾತ್ರ ಇಬ್ಬರ ನಡುವಿನ ಅತಿ ಪ್ರೀತಿಯ ಬಂಧಕ್ಕೆ ಸಾಕ್ಷಿಯಾಗಿದೆ,(ಏಜೆನ್ಸೀಸ್).