ಬಾಲಿವುಡ್ ಮಂದಿಗೆ ನಟಿ ಸ್ವರಾ ಭಾಸ್ಕರ್ ಛೀಮಾರಿ
- ಸೋನಮ್ ವಾಂಗ್‌ಚುಕ್ ಪ್ರತಿಭಟನೆಗೆ ದನಿಗೂಡಿಸದ ಬಾಲಿವುಡ್ ಮಂದಿ
- ಬಾಲಿವುಡ್ ಸ್ಟಾರ್ ಮಂದಿಯನ್ನು ನಂಬಬೇಡಿ ಎಂದ ನಟಿ ಸ್ವರಾ ಭಾಸ್ಕರ್
- ಉಪವಾಸ ಸತ್ಯಾಗ್ರಹ ಕೈಗೊಂಡ ವ್ಯಕ್ತಿ ಪರ ಧ್ವನಿ ಎತ್ತದ ಬಾಲಿವುಡ್ಗೆ ಛೀಮಾರಿ
ನವದೆಹಲಿ: ಪ್ರಸ್ತುತ, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಿರುವ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಆರೋಗ್ಯ ಪರಿಸ್ಥಿತಿ ಸದ್ಯ ದಿನೇ ದಿನೇ ಕ್ಷೀಣಿಸುತ್ತಿದೆ. ಈ ಮಧ್ಯೆ, ಸೋನಮ್ರ ಜೀವನವನ್ನೇ 3 ಈಡಿಯಟ್ಸ್ ಚಿತ್ರದ ಕಥೆಗೆ ಸ್ಫೂರ್ತಿಯಾಗಿ ಬಳಸಿಕೊಂಡ ಚಿತ್ರತಂಡ, ಈಗ ಅವರ ಪರ ಧ್ವನಿ ಎತ್ತದೆ, ಭೇಟಿಯೂ ಆಗದೆ ಮೌನವಾಗಿರುವುದಕ್ಕೆ ಸದ್ಯ ದೇಶವ್ಯಾಪಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಪ್ರತಿಭಟನೆಗೆ ಬೆಂಬಲ ಘೋಷಿಸಿದ ನಟಿ ಸ್ವರಾ ಭಾಸ್ಕರ್, ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದಕ್ಕೆ ಮೃತಪಟ್ಟ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಧರಣಿ ಕುಳಿತಿರುವ ಸೋನಮ್ ಬಗ್ಗೆ ಬಾಲಿವುಡ್ ತಾರೆಯರು ತೋರಿಸುತ್ತಿರುವ ನಿರ್ಲಕ್ಷ್ಯ, ಮೌನಕ್ಕೆ ತೀವ್ರವಾಗಿ ಖಂಡಿಸಿದ್ದಾರೆ.
ಈಗಿರುವ ಪರಿಸ್ಥಿತಿಯ ಬಗ್ಗೆ ಅರಿತಿದ್ದರೂ ಅನೇಕ ಬಾಲಿವುಡ್ ಸ್ಟಾರ್ಗಳು ಪ್ರತಿಭಟನೆಯನ್ನು ಬೆಂಬಲಿಸಲು ಮುಂದೆ ಬರುತ್ತಿಲ್ಲ. ಎಲ್ಲಿ ನಾವು ಏನಾದರೂ ಮಾತನಾಡಿದರೆ, ತಮ್ಮ ಕರಿಯರ್ಗೆ ಮುಳ್ಳಾಗಲಿದೆಯೋ, ಬಣ್ಣದ ಬದುಕು ಅಂತ್ಯಗೊಳ್ಳುತ್ತದೆಯೋ ಎಂಬ ಭಯದಲ್ಲಿ ಇವರಾರು ತುಟಿಬಿಚ್ಚುತ್ತಿಲ್ಲ. 2011ರಲ್ಲಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸಾಕಷ್ಟು ಬೆಂಬಲ ನೀಡಿದ್ದ ಬಾಲಿವುಡ್, ಈಗ ವಾಂಗ್‌ಚುಕ್ ವಿಚಾರದಲ್ಲಿ ರಾಜಕೀಯ ಪರಿಸ್ಥಿತಿಗೆ ಕಟ್ಟುಬಿದ್ದು, ಹೆದರಿ ದೂರ ಉಳಿದಿದೆ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಸಾಮಾಜಿಕ ಸಮಸ್ಯೆಗಳ ಪರ ಧ್ವನಿ ಎತ್ತಲು, ಹೋರಾಡಲು ಯಾವುದೇ ಕಾರಣಕ್ಕೂ ಸಿನಿಮಾ ತಾರೆಯರ ಮೇಲೆ ಡಿಪೆಂಡ್ ಆಗಬೇಡಿ. ಈ ವಿಷಯಗಳಲ್ಲಿ ಸ್ಟಾರ್ ಕಲಾವಿದರನ್ನು ನಂಬಬೇಡಿ. ಒಬ್ಬ ತಾರೆ ಬೆಂಬಲಿಸಿದ ಮಾತ್ರಕ್ಕೆ ಪ್ರತಿಭಟನೆಗೆ ಕಳೆ ಬರುವುದಿಲ್ಲ. ವಿಷಯವೇ ಅಲ್ಲಿ ಅತೀ ಮುಖ್ಯ. ನನ್ನ ಮಗಳ ಉತ್ತಮ ಭವಿಷ್ಯ ಮತ್ತು ಸುರಕ್ಷತೆಗಾಗಿ ನಾನೂ ಸಹ ವಾಂಗ್‌ಚುಕ್ ಅವರ ಪ್ರತಿಭಟನೆಗೆ ಸಾಥ್ ನೀಡಲು ಬಂದಿರುವುದಾಗಿ ಓಪನ್ ಆಗಿ ಹೇಳಿದ್ದಾರೆ.
ಇಲ್ಲಿಯವರೆಗೆ ಚಿತ್ರ ನಿರ್ಮಾಪಕರಾದ ನಾಸಿರುದ್ದೀನ್ ಶಾ, ಕಲಾವಿದರಾದ ರತ್ನ ಪಾಠಕ್ ಶಾ, ಜೀನತ್ ಅಮನ್, ಶಬಾನಾ ಅಜ್ಮಿ, ಅಭಯ್ ಡಿಯೋಲ್, ಅನುರಾಗ್ ಕಶ್ಯಪ್, ಸೋನಾಕ್ಷಿ ಸಿನ್ಹಾ ಮತ್ತು ಪ್ರಕಾಶ್ ರಾಜ್ ಸೇರಿ ಕೆಲವೇ ಕೆಲವರು ಮಾತ್ರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಪ್ರತಿಭಟನೆಗೆ ಸಾರ್ವಜನಿಕವಾಗಿ ಬೆಂಬಲ ನೀಡಿದ್ದಾರೆ,(ಏಜೆನ್ಸೀಸ್).