- ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ನಟಿ ಜ್ಯೋತಿಕಾ ಪಟ್ಟು
- ವಿದ್ಯಾರ್ಥಿಗಳ ಹೋರಾಟಕ್ಕೆ ಹಾಗೂ 'Gen Z' ಜನತೆಗೆ ಶ್ಲಾಘನೆ
- ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುವಂತೆ ಹೇಳಿದ ನಟಿ
- ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದವರಲ್ಲಿ ಬಾಲಿವುಡ್ನವರೇ ಹೆಚ್ಚು
ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕಳೆದೊಂದು ತಿಂಗಳಿನಿಂದ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೋಡದೆ ಕೊನೆಗಾಣುವ ಲಕ್ಷಣಗಳು ಕಾಣುತ್ತಿಲ್ಲ. ಭಾರಿ ವಿವಾದಕ್ಕೆ ಸಾಕ್ಷಿಯಾಗಿರುವ ನೀಟ್ ಸೋರಿಕೆ ವಿರುದ್ಧ ತಮಿಳು ಸ್ಟಾರ್ ನಟ ಸೂರ್ಯ ಅವರ ಪತ್ನಿ, ನಟಿ ಜೋತಿಕಾ ಕೂಡ ಧ್ವನಿ ಎತ್ತಿದ್ದಾರೆ.
ಈ ಅಕ್ರಮದ ಹೊಣೆಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ಘೋಷಿಸುವುದು ಸರಿ ಎಂದು ಆಗ್ರಹಿಸಿದರು. ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದ ನಟಿ, ತಮ್ಮ ಸೋಷಿಯಲ್ ಮೀಡಿಯಾದ ಅಧಿಕೃತ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಬರೆದು, ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.
"ನಾನು ವಿದ್ಯಾರ್ಥಿಗಳು, ದೇಶದ ಭವಿಷ್ಯ, ಪಾರದರ್ಶಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಯ ಪರವಾಗಿ ನಿಲ್ಲುತ್ತೇನೆ. ಧರ್ಮೇಂದ್ರ ಪ್ರಧಾನ್ ಅವರೇ, ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಾನು ನಮ್ಮ ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ಪರ. ಸೋನಮ್ ವಾಂಗ್ಚುಕ್, ಅಭಿಜೀತ್ ದೀಪ್ಕೆ ಮತ್ತು ಸೌರವ್ ದಾಸ್ ಅವರೇ, ಒಬ್ಬ ತಾಯಿಯಾಗಿ ನನ್ನ ಮಕ್ಕಳೂ ಕೂಡ ನಿಮ್ಮಂತೆಯೇ ಬೆಳೆಯಲಿ ಎಂದು ಆಶಿಸುವೆ" ಎಂದಿದ್ದಾರೆ.
ನಮ್ಮ ಜೆನ್ಝಿ ಯುವಜನತೆಯನ್ನು ನಾನು ಶ್ಲಾಘಿಸಿಸುವೆ. ಯಾವುದೇ ಮುಲಾಜಿಲ್ಲದೇ, ದಿಟ್ಟವಾಗಿ ಧ್ವನಿ ಎತ್ತುತ್ತಿರುವ ನಿಮ್ಮನ್ನು ಕಂಡು ಹೆಮ್ಮೆಯಾಗುತ್ತಿದೆ. ಎಲ್ಲರೂ ಒಟ್ಟಾಗಿ ಭಾರತ ಏನು ಎಂಬುದನ್ನು ನಿರೂಪಿಸಿದ್ದೀರಿ. ನಮ್ಮಲ್ಲಿನ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ನಟಿಯ ಮಾತಿಗೆ ಪರ-ವಿರೋಧ ಚರ್ಚೆಗಳು ಶುರುವಾಗಿದ್ದು, ಹಲವರು ಜ್ಯೋತಿಕಾಗೆ ಸಾಥ್ ನೀಡಿದ್ದಾರೆ.
ಹೋರಾಟಕ್ಕೆ ದನಿಗೂಡಿಸಿದ ಸಿನಿ ತಾರೆಗಳು
ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರ ದೌರ್ಜನ್ಯ ಹಾಗೂ ನೀಟ್ ಅಕ್ರಮವನ್ನು ಖಂಡಿಸಿ ಭಾರತೀಯ ಚಿತ್ರರಂಗದ ಹೆಸರಾಂತ ಸ್ಟಾರ್ ನಟ-ನಟಿಯರು ಧ್ವನಿ ಎತ್ತಿದ್ದೇ ಆದರೂ ಅವರಲ್ಲಿ ಕೆಲವೇ ಕೆಲವರು ಮಾತ್ರ ಬಹಿರಂಗವಾಗಿ ಬೆಂಬಲ ನೀಡುತ್ತಿದ್ದಾರೆಯೇ ವಿನಃ ಬಹುತೇಕರು ಪ್ರಕರಣಕ್ಕೆ ಸಂಬಂಧಿಸಿದಂತೆ ತುಟಿ ಬಿಚ್ಚಲು ಹಿಂದೇಟು ಹಾಕುತ್ತಿದ್ದಾರೆ.
ಜ್ಯೋತಿಕಾ, ಆಲಿಯಾ ಭಟ್, ಸಲ್ಮಾನ್ ಖಾನ್, ಹುಮಾ ಖುರೇಶಿ, ಸೊನಾಕ್ಷಿ ಸಿನ್ಹಾ, ಪ್ರಕಾಶ್ ರಾಜ್, ನಾಸಿರುದ್ದೀನ್ ಶಾ, ರತ್ನ ಪಾಠಕ್ ಶಾ, ವರುಣ್ ಧವನ್, ಶಬಾನಾ ಅಜ್ಮಿ, ಆರ್. ಮಾಧವನ್, ಕಮಲ್ ಹಾಸನ್, ಅನುಪಮ್ ಖೇರ್, ದುಲ್ಕರ್ ಸಲ್ಮಾನ್, ಇಮ್ರಾನ್ ಖಾನ್, ಮೋಹನ್ ಲಾಲ್, ನಿರ್ದೇಶಕ ಅನುರಾಗ್ ಕಶ್ಯಪ್ ಹಾಗೂ ಹಾಲಿವುಡ್ ನಟ ಜಾನ್ ಕುಸಾಕ್ ಸೇರಿದಂತೆ ಅನೇಕ ಸ್ಟಾರ್ ಸೆಲೆಬ್ರಿಟಿಗಳು ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದ್ದಾರೆ,(ಏಜೆನ್ಸೀಸ್).