ನಟ ದಳಪತಿ ವಿಜಯ್ 
ದೇಶ

ಕರೂರು ಕಾಲ್ತುಳಿತ ಬಳಿಕ ಇಂದು ಮೊದಲ ಬಾರಿಗೆ ನಟ ದಳಪತಿ ವಿಜಯ್ ಜನ ಸಂಪರ್ಕ ಸಭೆ | Thalapathy Vijay

ಚೆನ್ನೈ: ಸೆ. 27ರಂದು ಕರೂರಿನಲ್ಲಿ ನಡೆದ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟು, ಹಲವು ಜನ ಗಾಯಗೊಂಡಿದ್ದರು. ಆ ಬಳಿಕ ಇಂದು(ನ. 23) ಮೊದಲ ಬಾರಿಗೆ ನಟ ದಳಪತಿ ವಿಜಯ್(Thalapathy Vijay) ಜನ ಸಂಪರ್ಕ ಸಭೆಯನ್ನು ಆಯೋಜಿಸಿದ್ದಾರೆ ಎಂದು ವರದಿಯಾಗಿದೆ.
ಕಾಂಚೀಪುರ ಜಿಲ್ಲೆಯಲ್ಲಿ ಖಾಸಗಿ ಕಾಲೇಜಿನ ಒಳಾಂಗಣದಲ್ಲಿ ಸೀಮಿತ ಜನರ ಭಾಗವಹಿಸುವ ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ. ಕಾಂಚೀಪುರಂ ಜಿಲ್ಲೆಯಿಂದ ಕೇವಲ 2,000 ಮಂದಿ ಕಾರ್ಯಕರ್ತರು, ಜನರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುವುದು ಮತ್ತು QR-ಕೋಡ್ ಪಾಸ್‌ಗಳ ಮೂಲಕ ಪ್ರವೇಶವನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಟಿವಿಕೆ ತಿಳಿಸಿದೆ.
ಕಾರ್ಯಕ್ರಮಕ್ಕೂ ಮುನ್ನ, ಟಿವಿಕೆ ಜಿಲ್ಲಾ ಕಾರ್ಯಕರ್ತರು ಪೊಲೀಸ್ ರಕ್ಷಣೆ ಕೋರಿ ಕಾಂಚೀಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅದೇ ಖಾಸಗಿ ಕಾಲೇಜಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಹಾಯದಿಂದ ಪಕ್ಷದ ಭದ್ರತಾ ಪಡೆ ವಿಭಾಗಕ್ಕೆ ತರಬೇತಿ ನೀಡಲಾಗಿದೆ.
ಇದಕ್ಕೂ ಮೊದಲು ಡಿ. 4ರಂದು ಸೇಲಂನಲ್ಲಿ ಮೆಗಾ ರ್ಯಾಲಿ ನಡೆಸಲು ಅನುಮತಿಗಾಗಿ ಟಿವಿಕೆ ಅರ್ಜಿ ಸಲ್ಲಿಸಿತ್ತು, ಆದರೆ ಅದೇ ದಿನ ನಿಗದಿಯಾಗಿದ್ದ ಸ್ಥಳೀಯ ಕಾರ್ಯಕ್ರಮವನ್ನು ಉಲ್ಲೇಖಿಸಿ ಪೊಲೀಸರು ಅನುಮೋದನೆಯನ್ನು ನಿರಾಕರಿಸಿದ್ದರು. ಜನಸಂದಣಿಯ ಕಾರಣದಿಂದ ಬೇರೆ ದಿನಾಂಕದೊಂದಿಗೆ ಮತ್ತೆ ಅರ್ಜಿ ಸಲ್ಲಿಸುವಂತೆ ಇಲಾಖೆ ಹೇಳಿತ್ತು.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಹಿನ್ನೆಲೆ ವಿಜಯ್ ಪಕ್ಷದ ಭಾಗವಾಗಿ ಜನರ ಸಂಪರ್ಕ ಸಾಧಿಸಲು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ (ಏಜೆನ್ಸೀಸ್).