Fake Post About Yogi | ಯೋಗಿ ಆದಿತ್ಯನಾಥ್ ಹೆಸರಿನಲ್ಲಿ ನಕಲಿ ಪೋಸ್ಟ್ ಹಂಚಿಕೊಂಡಿದ್ದ ನಟ ಕಮಾಲ್ ರಶೀದ್ ಖಾನ್
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಿನಲ್ಲಿ ನಕಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಬಾಲಿವುಡ್ ನಟ ಕಮಾಲ್ ರಶೀದ್ ಖಾನ್ (KRK) ವಿರುದ್ಧ ಲಕ್ನೋದಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಪೋಸ್ಟ್ನಲ್ಲೇನಿದೆ..?
2025 ರ ಡಿಸೆಂಬರ್ ಕೊನೆಯಲ್ಲಿ, ಕಮಾಲ್ ಖಾನ್ ತಮ್ಮ ಎಕ್ಸ್ ಖಾತೆಯಲ್ಲಿ ಪತ್ರಿಕೆಯೊಂದರ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ಅದರಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಫೋಟೋ ಜೊತೆಗೆ, ನಮಗೆ ಮುಸ್ಲಿಂ, ದಲಿತ ಮತ್ತು ಯಾದವ್ ಮತಗಳು ಸಿಗದಿದ್ದರೂ ನಾವು ಸರ್ಕಾರ ರಚಿಸುತ್ತೇವೆ ಎಂಬ ಹೇಳಿಕೆಯನ್ನು ಸೇರಿಸಲಾಗಿತ್ತು. ಆದರೆ ತನಿಖೆಯ ಬಳಿಕ ಇದು ಸಂಪೂರ್ಣ ನಕಲಿ ಪೋಸ್ಟ್ ಎಂಬುದು ತಿಳಿದುಬಂದಿದೆ.
ಕ್ಷಮೆಯಾಚಿಸಿದ ಕೆಆರ್‌ಕೆ..
ನಕಲಿ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಕ್ಷಮೆಯಾಚಿಸಿರುವ ಕೆಆರ್‌ಕೆ, ಅದು ಒರಿಜಿನಲ್ ಅಲ್ಲ ಎಂದು ಗೊತ್ತಾದ ತಕ್ಷಣ ಪೋಸ್ಟ್ ಡಿಲೀಟ್ ಮಾಡಿದ್ದೇನೆ, ಮುಂದೆ ಈ ರೀತಿಯ ಘಟನೆ ನಡೆಯದಂತೆ ಜಾಗರೂಕನಾಗಿರುತ್ತೇನೆ, ಧನ್ಯವಾದಗಳು! ಎಂದು ಖಾನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಉತ್ತರ ಪ್ರದೇಶ ಪೊಲೀಸ್ ಮತ್ತು ಯುಪಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅವರನ್ನು ಟ್ಯಾಗ್ ಮಾಡಿದ್ದಾರೆ.
ಕೆಆರ್‌ಕೆ ವಿರುದ್ಧ ಎಫ್‌ಐಆರ್ ದಾಖಲು
ನಕಲಿ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೆಆರ್‌ಕೆ ಕ್ಷಮೆಯಾಚಿಸಿದರೂ ಕೂಡ , ರಾಜ್‌ಕುಮಾರ್ ತಿವಾರಿ ಅವರ ದೂರಿನ ಮೇರೆಗೆ ಲಖನೌದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕೆಆರ್‌ಕೆ ಹಿಂದೂ ಧರ್ಮದವರ ಭಾವನೆಗಳಿಗೆ ಧಕ್ಕೆ ತಂದಿದ್ದು, ಆದಿತ್ಯನಾಥ್ರ ಬಗ್ಗೆ ನಕಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಉತ್ತರ ಪ್ರದೇಶ ಸರ್ಕಾರದ ವರ್ಚಸ್ಸಿಗೆ ಕಳಂಕ ತರಲು ಪ್ರಯತ್ನಿಸಿದ್ದಾರೆ ಎಂದು ತಿವಾರಿ ಆರೋಪಿಸಿದ್ದು, ಇದು ಖಂಡನೀಯ, ಹಿಂದೂ ಸಮುದಾಯವನ್ನು ಕೆರಳಿಸಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಈಗ ಕೆಆರ್‌ಕೆ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ(ಏಜೆನ್ಸೀಸ್).