ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿರುವ ನಟ ದರ್ಶನ್ಗೆ ಜೈಲಿನಲ್ಲಿ ಮೂಲ ಸೌಕರ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಹಾಗೂ ಆರ್.ಮಹಾದೇವನ್ ನೇತ್ರತ್ವದ ದ್ವಿಸದಸ್ಯ ಪೀಠ, ದರ್ಶನ್ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ್ದು, ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜೈಲಿನಲ್ಲಿ ನನ್ನ ಕಕ್ಷಿದಾರನಿಗೆ ಉನ್ನತ ಮಟ್ಟದ ಸೌಲಭ್ಯ ನೀಡಬಾರದು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿರುವುದರಿಂದ ಮೂಲ ಸೌಲಭ್ಯಗಳೂ ದೊರೆಯದಂತಾಗಿದೆ.
ಎಂಟು ತಿಂಗಳು ಕಳೆದರೂ ಕೂಡ ಸಾಕ್ಷಿಗಳ ವಿಚಾರಣೆ ಮುಕ್ತಾಯಗೊಂಡಿಲ್ಲ. 273 ಸಾಕ್ಷಿಗಳ ಪೈಕಿ ಕೇವಲ 15 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಇದೇ ರೀತಿ ಮುಂದುವರಿದರೆ ವಿಚಾರಣೆ ಮುಗಿಯಲು ಹಲವು ವರ್ಷಗಳೇ ಬೇಕಾಗುತ್ತದೆ. ಅಲ್ಲದೆ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನೂ ನೀಡದೆ, ಕ್ವಾರೆಂಟೇನ್ ಸೆಲ್ನಲ್ಲಿ ಇಡಲಾಗಿದೆ. ಕನಿಷ್ಠ ಸೌಲಭ್ಯಗಳ ಕುರಿತು ಕೋರ್ಟ್ ಮೊರೆ ಹೋದರೆ ಸುಪ್ರೀಂ ಕೋರ್ಟ್ನಲ್ಲಿ ಆದೇಶ ಆಗಿದೆ ಎಂದು ಸೆಷನ್ಸ್ ಕೋರ್ಟ್ ಹೇಳಿದೆ ಎಂದು ವಾದ ಮಂಡಿಸಿದರು
ವಾದ ಆಲಿಸಿದ ನ್ಯಾಯಪೀಠ, ಎಷ್ಟು ಸಾಕ್ಷಿಗಳ ವಿಚಾರಣೆ ಈವರೆಗೆ ಮುಗಿದಿದೆ? ಎಷ್ಟು ಸಾಕ್ಷಿಗಳನ್ನು ವಿಚಾರಣೆಗಾಗಿ ಪ್ರಾಸಿಕ್ಯೂಷನ್ ಸೂಚಿಸಿದೆ? ಇನ್ನೆಷ್ಟು ದಿನ ಬೇಕಾಗುತ್ತದೆ? ಹಾಗೂ ದರ್ಶನ್ ಗೆ ಕನಿಷ್ಠ ಸೌಲಭ್ಯ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಒಂದು ವಾರದಲ್ಲಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ಕೋರ್ಟ್ ಸೂಚನೆ ನೀಡಿದೆ.