ಶೇರ್ ಟು ಶೈನ್ 2026ರ ಥೀಮ್ ಘೋಷಿಸಿದ ಅಚ್ಯುತ ಸಮಂತ
ಭುವನೇಶ್ವರ: ಅಂತಾರಾಷ್ಟ್ರೀಯ ಆರ್ಟ್ ಆಫ್ ಗಿವಿಂಗ್ ದಿನಾಚರಣೆ ಅಂಗವಾಗಿ ಈ ಬಾರಿಯ ಥೀಮ್ ʼಶೇರ್ ಟು ಶೈನ್ʼ ಅನ್ನು ಆರ್ಟ್ ಆಫ್ ಗಿವಿಂಗ್‌ನ ಸಂಸ್ಥಾಪಕರಾದ ಅಚ್ಯುತ ಸಮಂತ ಅವರು ಬಿಡುಗಡೆಗೊಳಿಸಿದರು.
ಮೇ 17ರಂದು ಆರ್ಟ್ ಆಫ್ ಗಿವಿಂಗ್‌ನ ಸಂಸ್ಥಾಪನಾ ದಿನವಾಗಿದ್ದು, ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಂತೋಷ, ಒಗ್ಗಟ್ಟು ಮತ್ತು ಮಾನವೀಯತೆಯ ಮನೋಭಾವದಿಂದ ಆಚರಿಸಲಾಗುವ ಈ ದಿನ ಪ್ರಪಂಚದಾದ್ಯಂತ ಕೋಟ್ಯಂತರ ಜನರನ್ನು ಒಗ್ಗೂಡಿಸಲಿದೆ.
ಪ್ರತಿ ವರ್ಷವು ಆರ್ಟ್ ಆಫ್ ಗಿವಿಂಗ್‌ನ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಒಂದೊಂದು ಥೀಮ್ ಅಡಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. 2014ರಲ್ಲಿ ಸಮಾಜ, ಆಧ್ಯಾತ್ಮಿಕತೆ ಮತ್ತು ಮಾನವೀಯತೆ ಥೀಮ್‌ನಿಂದ ಆರಂಭವಾಗಿದ್ದು, ಕಳೆದ ವರ್ಷ ನೆರೆಹೊರೆ-ದಯೆಯ ನೆರೆಹೊರೆ ಉತ್ತೇಜನ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗಿತ್ತು.
ಕಳೆದ ವರ್ಷ ಬೆಂಗಳೂರಿನ ಗಾಂಧಿ ಭವನದಲ್ಲಿ ಆರ್ಟ್ ಆಫ್ ಗಿವಿಂಗ್‌ನ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಿವೃತ್ತ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಬಾರಿಯೂ ಬೆಂಗಳೂರಿನಲ್ಲಿ ಮೇ 17ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಶೇರ್ ಟು ಶೈನ್
ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಥೀಮ್ ಅನ್ನು ಆರ್ಟ್ ಆಫ್ ಗಿವಿಂಗ್ ಆಚರಣೆಗೆ ಆಯ್ಕೆ ಮಾಡಲಾಗಿದೆ. ಆರ್ಟ್ ಆಫ್ ಗಿವಿಂಗ್ ರೂವಾರಿಗಳು, ಮಾಜಿ ಸಂಸದರು ಹಾಗೂ ಕಳಿಂಗ ಇನ್ಸ್‌ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) (ಕೆಐಐಟಿ) ಮತ್ತು ಕಳಿಂಗ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ಸ್ (KISS) (ಕೆಐಎಸ್‌ಎಸ್) ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು ಪ್ರತಿವರ್ಷದಂತೆ ಥೀಮ್ ಬಿಡುಗಡೆ ಮಾಡಿದರು.
ಒಂದು ಮೇಣದಬತ್ತಿಯ ಮೂಲಕ ಮತ್ತೊಂದು ಮೇಣದ ಬತ್ತಿ ಅಥವಾ ಹಣತೆಯನ್ನು ಬೆಳಗಿಸಿದರೆ ಎರಡೂ ಏನನ್ನೂ ಕಳೆದುಕೊಳ್ಳುವುದಿಲ್ಲ. ಬದಲಿಗೆ ಎರಡೂ ಪ್ರಕಾಶಮಾನವಾಗಿ ಜಗತ್ತನ್ನು ಬೆಳಗಲಿವೆ. ಇದೇ ಈ ಬಾರಿಯ ಥೀಮ್‌ನ ವಿಶೇಷ. 2013ರಲ್ಲಿ ಆರ್ಟ್ ಆಫ್ ಗಿವಿಂಗ್ ಆರಂಭವಾಗಿದ್ದು, ಮಾನವೀಯ ಚಳವಳಿಯಾಗಿ ವಿಶ್ವದಾದ್ಯಂತ ಪ್ರೀತಿ, ಶಾಂತಿ ಮತ್ತು ಸಂತೋಷವನ್ನು ಹಂಚುತ್ತಿದೆ. ದಾನವನ್ನು ಹರಡಲು, ಬೆಂಬಲಿಸಲು ಮತ್ತು ಉತ್ತೇಜಿಸುವ ಉಪಕ್ರಮವಾಗಿದೆ.
ಜ್ಞಾನ, ಪ್ರೀತಿ, ಅನುಭವ ಹಂಚಿಕೊಂಡಾಗ ಕಡಿಮೆಯಾಗುವುದಿಲ್ಲ: ಸಮಂತ
ಈ ಬಾರಿಯ ಥೀಮ್ ವಿಶೇಷವಾಗಿದೆ. ನಿಮ್ಮಲ್ಲಿರುವ ಜ್ಞಾನ, ಪ್ರೀತಿ, ಆಹಾರ, ಸಮಯ ಮತ್ತು ಅನುಭವವನ್ನು ಹಂಚಿಕೊಂಡಾಗ ಅದು ಕಡಿಮೆ ಆಗುವುದಿಲ್ಲ. ನೀವು ಅಂತರ್ಗತವಾಗಿ ಹೊಳೆಯುತ್ತೀರಿ. ಒಂದು ಮೇಣದ ಬತ್ತಿ ಮತ್ತೊಂದನ್ನು ಬೆಳಗಿಸಿದಂತೆ ಎಂದು ಅಚ್ಯುತ ಸಮಂತ ಹೇಳಿದ್ದಾರೆ.
“ಮೇ 17 ರಂದು ನಮಗೆಲ್ಲರಿಗೆ ವಿಶೇಷವಾದ ದಿನ. ಅಂದು ಆರ್ಟ್ ಆಫ್ ಗಿವಿಂಗ್ ಸ್ಥಾಪನಾ ದಿನ. ಪ್ರತಿ ವರ್ಷದಂತೆ, ಒಂದು ಸರಳವಾದ ಮತ್ತು ಅರ್ಥಪೂರ್ಣ ಚಿಂತನೆಯೊಂದಿಗೆ ಒಂದಾಗುತ್ತೇವೆ. ಆರ್ಟ್ ಆಫ್ ಗಿವಿಂಗ್ ಕುಟುಂಬದ ನನ್ನ ಎಲ್ಲಾ ಪ್ರೀತಿಯ ಸದಸ್ಯರಿಗೆ ಸ್ವಾಗತ. ಇನ್ನೊಬ್ಬರಿಗೆ ನೀಡುವ ಮೂಲಕ, ಹಂಚಿಕೊಳ್ಳುವ ಮೂಲಕ ಅವರ ಬಾಳಲ್ಲಿ ಬೆಳಕನ್ನು ತರೋಣ. ಆ ಮೂಲಕ ಹೊಳೆಯೋಣ” ಎಂದು ಹೇಳಿದರು.
ನಮ್ಮ ಒಂದು ಸರಳವಾದ ದಯೆಯ ಮಾತು, ಉತ್ತಮ ಭಾವನೆಯಿಂದ ಮಾಡಿದ ಒಂದು ಕಿರು ಪ್ರಯತ್ನ ಬೇರೊಬ್ಬರ ಬದುಕಿಗೆ ಬೆಳಕನ್ನು ತರಬಹುದು ಎಂದು ವಿವರಿಸಿದರು.