ಕೇರಳದಲ್ಲಿ 350 KG ತೂಕದ ದೈತ್ಯ ಅಚಿನಿ ಶಾರ್ಕ್ ( Achini shark ) ಸೆರೆ
- ಕೇರಳದ ವಿಳಿಂಜಂ ಮೀನುಗಾರಿಕಾ ಬಂದರಿಗೆ ಆಗಮಿಸಿದ ಬೃಹತ್ ಅಚಿನಿ ಶಾರ್ಕ್
- ಈ ವರ್ಷ ಸುಮಾರು ಹತ್ತು ಬೃಹತ್ ಶಾರ್ಕ್‌ಗಳು ವಿಳಿಂಜಂ ಮೀನುಗಾರಿಕಾ ಬಂದರಿಗೆ ಆಗಮನ
- ಶಾರ್ಕ್ ಮೀನುಗಳ ರೆಕ್ಕೆಗಳನ್ನು ಒಣಗಿಸಿ ಔಷಧಿ ತಯಾರಿಸಲು ಬಳಸಲಾಗುತ್ತದೆ
ಕೊಚ್ಚಿ: ಕೇರಳದ ವಿಳಿಂಜಂ ಮೀನುಗಾರಿಕಾ ಬಂದರಿಗೆ ಆಗಮಿಸಿದ ಬೃಹತ್ ಅಚಿನಿ ಶಾರ್ಕ್ ( Achini shark ), ಹರಾಜಿನಲ್ಲಿ 83 ಸಾವಿರ ರೂ. ಮಾರಾಟವಾಗಿದೆ. ಈ ಶಾರ್ಕ್ ಸುಮಾರು 350 ಕೆಜಿ ತೂಕವಿದೆ. ಈ ವರ್ಷ ಸುಮಾರು ಹತ್ತು ಬೃಹತ್ ಶಾರ್ಕ್‌ಗಳು ವಿಳಿಂಜಂ ಮೀನುಗಾರಿಕಾ ಬಂದರಿಗೆ ಆಗಮಿಸಿವೆ ಎಂದು ವರದಿಯಾಗಿದೆ.
ಬಂದರಿಗೆ ಆಗಮಿಸಿದ ಶಾರ್ಕ್ ಮೀನನ್ನು ಮೀನುಗಾರರು ದಡಕ್ಕೆ ತರಲು ತುಂಬಾ ಶ್ರಮಿಸಿದರು. ಕೊನೆಗೆ ಹೇಗೋ ಕಷ್ಟಪಟ್ಟು ಭಾರಿ ಗಾತ್ರದ ಮೀನನ್ನು ದಡಕ್ಕೆ ತರುವಲ್ಲಿ ಯಶಸ್ವಿ ಸಹ ಆದರು. ಈ ವೇಳೆ ದೈತ್ಯ ಮೀನನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು ಮತ್ತು ತಮ್ಮ ಮೊಬೈಲ್ಗಳನ್ನು ಜೇಬಿಂದ ತೆಗೆದು, ಫೋಟೋಗಳನ್ನು ಸೆರೆಹಿಡಿದುಕೊಂಡರು.
ಅಂದಹಾಗೆ, ವಿದೇಶಿ ಮಾರುಕಟ್ಟೆಗಳಲ್ಲಿ ಶಾರ್ಕ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೇರಳದ ತಿರುವನಂತಪುರದಲ್ಲಿ ಅವುಗಳನ್ನು ಆಹಾರಕ್ಕಾಗಿ ಖರೀದಿ ಮಾಡದಿದ್ದರೂ, ಕೇರಳದ ಉತ್ತರ ಜಿಲ್ಲೆಗಳ ಜನರು ಅವುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆಂದು ವರದಿಯಾಗಿದೆ.
ಇನ್ನೂ ಶಾರ್ಕ್ ಮೀನುಗಳ ರೆಕ್ಕೆಗಳನ್ನು ಒಣಗಿಸಿ ಔಷಧಿ ತಯಾರಿಸಲು ಬಳಸಲಾಗುತ್ತದೆ. ಮೀನುಗಾರರು ಅವುಗಳ ತುಪ್ಪವನ್ನು ಮೀನಿನ ಎಣ್ಣೆ ಮಾತ್ರೆಗಳನ್ನು ತಯಾರಿಸಲು ಮತ್ತು ಅವುಗಳ ಹಲ್ಲುಗಳನ್ನು ಅಲಂಕಾರಿಕ ಹಾರಗಳನ್ನು ತಯಾರಿಸಲು ಬಳಸುತ್ತಾರೆ ಎಂದು ಹೇಳುತ್ತಾರೆ, (ಏಜೆನ್ಸೀಸ್).