ಸಿಎಂ ಹಿಮಂತ ಬಿಸ್ವಾ ಶರ್ಮಾ & ಗೌರವ್ ಗೊಗೊಯ್
ಗುವಾಹಟಿ: ಪಾಕಿಸ್ತಾನ ಜೊತೆ ಪತ್ನಿ ಸಂಪರ್ಕವಿದೆ ಎಂಬ ಸಿಎಂ ಹಿಮಂತ ಬಿಸ್ವಾ ಶರ್ಮಾ ಆರೋಪಕ್ಕೆ ತಿರಸ್ಕರಿಸಿರುವ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್(Gaurav Gogoi), ಅವನ ತಲೆಯಲ್ಲಿ ಕಾಡು ಸಿದ್ಧಾಂತ ಇದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಿಟಿಐ ಜೊತೆ ಮಾತನಾಡಿರುವ ಗೌರವ್ ಗೊಗೊಯ್, ಪತ್ನಿ ವಿರುದ್ಧ ಸಿಎಂ ಶರ್ಮಾ ಮಾಡಿರುವ ಆರೋಪಗಳು ಆಧಾರರಹಿತ, ಕಾಲ್ಪನಿಕತೆಯಿಂದ ಕೂಡಿವೆ. ಶರ್ಮಾ ಹೇಳುತ್ತಿರುವುದಕ್ಕೂ ಮತ್ತು ನಾನು ಅವರ ವಿರುದ್ಧ ಹೇಳುತ್ತಿರುವುದಕ್ಕೂ ವ್ಯತ್ಯಾಸವಿದೆ, ಅವರದು ಕಾಡು ಸಿದ್ಧಾಂತ, ಅದು ಅವರ ತಲೆಯಲ್ಲಿ ಮಾತ್ರ ಇದೆ. ರಾಷ್ಟ್ರೀಯ ಭದ್ರತಾ ಸಮಸ್ಯೆಗಳ ಗಂಭೀರತೆಯನ್ನು ಇಂತಹ ಆರೋಪಗಳು ದುರ್ಬಲಗೊಳಿಸುತ್ತವೆ ಎಂದು ಕಿಡಿಕಾರಿದ್ದಾರೆ.
ನಾವು ಸಿಎಂ ಕುಟುಂಬ ಮತ್ತು ಅವರ ಸಂಪತ್ತು, ಭ್ರಷ್ಟಾಚಾರ, ಸರ್ಕಾರಿ ಯಂತ್ರವು ಅವರ ಪತ್ನಿಯ ಕಂಪನಿಗೆ ನೀಡುತ್ತಿರುವ ಪ್ರಯೋಜನಗಳ ಬಗ್ಗೆ ಹೇಳುತ್ತಿರುವುದು ಎಲ್ಲರಿಗೂ ಗೋಚರಿಸುತ್ತದೆ. ಈ ಆರೋಪಗಳ ಮೇಲೆ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ ಕಾಲ್ಪನಿಕ ವಿಷಯಗಳನ್ನಿಟ್ಟುಕೊಂಡು ರಾಷ್ಟ್ರೀಯ ಭದ್ರತೆಯನ್ನು ಬಳಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಭದ್ರತೆ ರಾಜಕೀಯಕ್ಕಿಂತ ಮೇಲಿರಬೇಕು. ಮುಖ್ಯಮಂತ್ರಿಯೊಬ್ಬರು ಅದರ ಗಂಭೀರತೆಯನ್ನು ತೋರಿಸಬೇಕು. ಅಂತಹ ಗಂಭೀರ ಆರೋಪಗಳನ್ನು ಹಗುರವಾಗಿ ಮಾಡಬಾರದು ಎಂದಿದ್ದಾರೆ.
ಗೌರವ್ ಗೊಗೊಯ್ ಅವರ ಬ್ರಿಟಿಷ್ ಪತ್ನಿ ಎಲಿಜಬೆತ್ ಕ್ಲೇರ್ ಗೊಗೊಯ್ ಅವರಿಗೆ ಪಾಕ್ನ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕವಿದೆ ಎಂದು ಸಿಎಂ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ಎಸ್ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ (ಏಜೆನ್ಸೀಸ್).