ಗ್ರೇಟರ್ ನೋಯ್ಡಾ: ಇಲ್ಲಿನ ನಾಲೆಡ್ಜ್ ಪಾರ್ಕ್-3 ಸಿ ವ್ಯಾಪ್ತಿಯಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ಬಿ-ಟೆಕ್ ಎರಡನೇ ವರ್ಷದ ವಿದ್ಯಾರ್ಥಿಯೊಬ್ಬ ಶನಿವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ಝಾನ್ಸಿ ಮೂಲದ ಉದಿತ್ ಸೋನಿ ಎಂದು ಗುರುತಿಸಲಾಗಿದ್ದು, ಈ ಘಟನೆಯು ಹಾಸ್ಟೆಲ್ ಮ್ಯಾನೇಜ್‌ಮೆಂಟ್ ಮತ್ತು ವಿದ್ಯಾರ್ಥಿಗಳ ನಡುವಿನ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದೆ.
ಶುಕ್ರವಾರ ರಾತ್ರಿ ಉದಿತ್ ತನ್ನ ಸ್ನೇಹಿತರೊಂದಿಗೆ ಹಾಸ್ಟೆಲ್‌ಗೆ ಮರಳಿದ್ದನು. ಈ ವೇಳೆ ಆತ ಮದ್ಯ ಸೇವಿಸಿದ್ದಾನೆ ಎಂದು ಆರೋಪಿಸಿದ ಹಾಸ್ಟೆಲ್ ಆಡಳಿತ ಮಂಡಳಿಯು ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಷ್ಟಕ್ಕೇ ನಿಲ್ಲದ ಅಧಿಕಾರಿಗಳು, ಉದಿತ್‌ನ ವಿಡಿಯೋ ಚಿತ್ರೀಕರಿಸಿ ಆತನ ತಂದೆ ವಿಜಯ್ ಸೋನಿಗೆ ಕಳುಹಿಸಿದ್ದರು. ವಿಡಿಯೋ ನೋಡಿದ ತಂದೆ ಮಗನಿಗೆ ಫೋನ್ ಮಾಡಿ ಬೈದಿದ್ದಲ್ಲದೆ, ಕಾಲೇಜಿನಿಂದ ನಿನ್ನ ಹೆಸರು ತೆಗೆಸಿ ಮನೆಗೆ ವಾಪಸ್ ಕರೆಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ತೀವ್ರವಾಗಿ ನೊಂದ ಉದಿತ್, ಹಾಸ್ಟೆಲ್‌ನ 4ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸ್ಟೆಲ್ ವಿರುದ್ಧ ಗಂಭೀರ ಆರೋಪ
ಮೃತ ಉದಿತ್‌ನ ಸ್ನೇಹಿತ ಹರ್ಷಿತ್ ಈ ಕುರಿತು ಗಂಭೀರ ಆರೋಪ ಮಾಡಿದ್ದು, "ನಾವು ರಾತ್ರಿ 9 ಗಂಟೆಗೇ ಹಾಸ್ಟೆಲ್‌ಗೆ ಬಂದಿದ್ದೆವು. ವಿನಾಕಾರಣ ಮದ್ಯ ಸೇವನೆಯ ಆರೋಪ ಹೊರಿಸಿ ಉದಿತ್‌ಗೆ 10,000 ರೂ. ದಂಡ ವಿಧಿಸಲಾಯಿತು. ಅಷ್ಟೇ ಅಲ್ಲದೆ ಹಾಸ್ಟೆಲ್ ಸಿಬ್ಬಂದಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಖಿನ್ನತೆಗೊಳಗಾದ ಆತ ಈ ನಿರ್ಧಾರ ತೆಗೆದುಕೊಂಡಿದ್ದಾನೆ" ಎಂದು ದೂರಿದ್ದಾನೆ.
ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ವಿಧ್ವಂಸಕ ಕೃತ್ಯ
ಸಹಪಾಠಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕೆರಳಿದ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ಆಸ್ತಿಪಾಸ್ತಿ ಮತ್ತು ಬಸ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನಸಮೂಹವನ್ನು ಚದುರಿಸಿದ್ದಾರೆ.
"ಜನವರಿ 23ರ ರಾತ್ರಿ 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ನಾವು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹಲ್ಲೆಯ ಆರೋಪಗಳ ಬಗ್ಗೆ ಸ್ನೇಹಿತರು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ" ಎಂದು ಹೆಚ್ಚುವರಿ ಡಿಸಿಪಿ ಸುಧೀರ್ ಕುಮಾರ್ ತಿಳಿಸಿದ್ದಾರೆ,(ಏಜೆನ್ಸೀಸ್)