ಮೃತ ಪುಟ್ಟರಾಜು ಮತ್ತು ಆರೋಪಿ ಶಫಿ 
ದೇಶ

ಚಿಕ್ಕಮಗಳೂರಿನಲ್ಲಿ ಎರಡನೇ ಪತ್ನಿಗೆ ಉಡುಗೊರೆ ನೀಡಲು ಹಣಕ್ಕಾಗಿ ಆಪ್ತ ಸ್ನೇಹಿತನನ್ನೇ ಕೊಂದ ಆರೋಪಿ ಬಂಧನ | Arrested

ಚಿಕ್ಕಮಗಳೂರು: ಆರೋಪಿಯೊಬ್ಬ ತನ್ನ ಆಪ್ತ ಸ್ನೇಹಿತನನ್ನು ಕೊಂದು, ಆತನ ಬಳಿಯಿದ್ದ ಹಣವನ್ನು ದೋಚಿ ತನ್ನ ಎರಡನೇ ಹೆಂಡತಿಗೆ ಉಡುಗೊರೆ ನೀಡಿದ ಘಟನೆ ಚಿಕ್ಕಮಗಳೂರಿನ ಬೀರೂರಿನಲ್ಲಿ ನಡೆದಿದೆ ಎಂದು ಶನಿವಾರ(ಮಾ. 07) ವರದಿಯಾಗಿದೆ.
ವೃತ್ತಿಯಲ್ಲಿ ವೆಲ್ಡರ್ ಆಗಿದ್ದ ಪುಟ್ಟರಾಜು ಎಂಬಾತನನ್ನು ಫೆ. 19ರಂದು ಕೊಲೆಯಾಗಿತ್ತು. ಆತನನ್ನು ಕೊಲೆ ಮಾಡಿದ ಆರೋಪದ ಮೇಲೆ ಶುಕ್ರವಾರ ಬೀರೂರು ನಿವಾಸಿ ಮತ್ತು ಮೃತನ ಸ್ನೇಹಿತ ಶಫಿಯನ್ನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಕಳೆದ 7 ವರ್ಷಗಳಿಂದ ಪುಟ್ಟರಾಜು ಮತ್ತು ಶಫಿ ಸ್ನೇಹಿತರಾಗಿದ್ದರು. ಹಣಕಾಸು ಕಂಪನಿಯೊಂದು ನಡೆಸಿದ ಚಿನ್ನದ ಹರಾಜಿನಲ್ಲಿ ಭಾಗವಹಿಸುವಂತೆ ಪುಟ್ಟರಾಜು ಅವರನ್ನು ಶಫಿ ಮನವೊಲಿಸಿದ್ದ ಎನ್ನಲಾಗಿದೆ.
ಆತನನ್ನು ನಂಬಿದ ಪುಟ್ಟರಾಜು ಫೆ. 19ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸುಮಾರು 2.5 ಲಕ್ಷ ನಗದನ್ನು ತೆಗೆದುಕೊಂಡು ಶಫಿ ಜೊತೆ ಮನೆಯಿಂದ ತೆರಳಿದ್ದ ಎನ್ನಲಾಗಿದೆ. ಬಳಿಕ ಆರೋಪಿ ಪುಟ್ಟರಾಜುನನ್ನು ಬೈಕ್‌ನಲ್ಲಿ ಹೊನ್ನವಳ್ಳಿ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮಚ್ಚಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ, ನಗದು ತೆಗೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮರುದಿನ ಬೆಳಿಗ್ಗೆ, ಅರಣ್ಯ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಹಾಲು ವ್ಯಾಪಾರಿಯೊಬ್ಬರು ಶವವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದ ಪೊಲೀಸುರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತನಿಖೆಯಲ್ಲಿ ಮೃತನನ್ನು ಪುಟ್ಟರಾಜು ಎಂದು ಪೊಲೀಸರು ಗುರುತಿಸಿದ್ದು, ಆತನ ಕೊನೆಯ ಚಲನವಲನಗಳನ್ನು ಪತ್ತೆಹಚ್ಚಿದ್ದರು. ಈ ವೇಳೆ ಕೊನೆಯಲ್ಲಿ ಆರೋಪಿ ಶಫಿ ಜೊತೆ ತೆರಳಿದ್ದು ಗೊತ್ತಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿ ಶಫಿ ಅರಸೀಕೆರೆಯ ಲಾಡ್ಜ್​ನಲ್ಲಿ ತನ್ನ ಎರಡನೇ ಹೆಂಡತಿಯನ್ನು ಭೇಟಿಯಾಗಿ 60 ಸಾವಿರ ಹಣ ಕೊಟ್ಟು, ಹೊಸ ಟಿವಿ ಕೊಡಿಸಿದ್ದನ್ನು ಪತ್ತೆ ಹೆಚ್ಚಿದ್ದಾರೆ. ನಂತರ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ (ಏಜೆನ್ಸೀಸ್).