ನವದೆಹಲಿ: ಭಾರತೀಯ ಪೌರತ್ವ ಪಡೆಯುವ ಮೊದಲೇ ವಂಚನೆಯಿಂದ ಮತದಾರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲಾಗಿದೆ ಎಂಬ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯ ವಿಚಾರಣೆಯನ್ನು ಇಂದು(ಮಾ. 30) ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿಯವರ ಹೆಸರನ್ನು ವಂಚನೆಯಿಂದ ಸೇರಿಸಲಾಗಿದೆ ಎಂಬ ಆರೋಪದ ಬಗ್ಗೆ ಪೊಲೀಸ್ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2025 ಸೆ. 11ರಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ರದ್ದುಗೊಳಿಸಿದ್ದರು. ಅದನ್ನು ಪ್ರಶ್ನಿಸಿ ವಕೀಲ ವಿಕಾಸ್ ತ್ರಿಪಾಠಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ದೂರುದಾರರ ಅರ್ಜಿ ಪ್ರಕಾರ, ಸೋನಿಯಾ ಗಾಂಧಿಯವರು 1983 ಏಪ್ರಿಲ್ನಲ್ಲಿ ಔಪಚಾರಿಕವಾಗಿ ಭಾರತೀಯ ಪೌರತ್ವವನ್ನು ಪಡೆದರು. ಅದಕ್ಕೂ ಮೂರು ವರ್ಷಗಳ ಮೊದಲೇ ಅಂದ್ರೆ, 1980ರಲ್ಲಿ ನವದೆಹಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿತ್ತು. ಇದು ನಕಲಿ ಅಥವಾ ಕೃತಕ ದಾಖಲೆಗಳಿಲ್ಲದೇ ಸೇರ್ಪಡೆ ಮಾಡಲು ಸಾಧ್ಯವಿಲ್ಲ, ಇಂದು ಗಂಭೀರ ಕ್ರಿಮಿನಲ್ ಅಪರಾಧ ಎಂದು ಆರೋಪಿಸಲಾಗಿದೆ.
1980ರಲ್ಲಿ ಸೇರಿಸಿದ ಸೋನಿಯಾ ಗಾಂಧಿಯವರ ಹೆಸರನ್ನು 1982ರಲ್ಲಿ ಮತದಾರರ ಪಟ್ಟಿಯಿಂದ ಅಳಿಸಿದ್ದು, ಅವರು ಪೌರತ್ವ ಪಡೆದ ಬಳಿಕ 1983 ಏಪ್ರಿಲ್ನಲ್ಲಿ ಮತ್ತೆ ಸೇರಿಸಲಾಯಿತು. ಇದು ಹಿಂದಿನ ನಮೂದಿನ ಕಾನೂನುಬದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವಾದಿಸಲಾಗಿದೆ.
2025 ಡಿ. 029ರಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ನ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ, ಈ ಅರ್ಜಿಯನ್ನು ಪರಿಶೀಲಿಸಲು ಒಪ್ಪಿಕೊಂಡು, ಸೋನಿಯಾ ಗಾಂಧಿ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆಗೆ ಪಟ್ಟಿ ಮಾಡಿದ್ದರು. ಆದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮಾತ್ರ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿತ್ತು (ಏಜೆನ್ಸೀಸ್).