ಸ್ಪೀಕರ್ ಜೆಸಿಡಿ ಪ್ರಭಾಕರ್ ಮತ್ತು ಎಡಪ್ಪಾಡಿ ಪಳನಿಸ್ವಾಮಿ
ಚೆನ್ನೈ: ವಿಶ್ವಾಸಮತಯಾಚನೆ ವೇಳೆ ಪಕ್ಷದ ವಿಪ್ ಉಲ್ಲಂಘಿಸಿದ್ದಕ್ಕಾಗಿ ಅನರ್ಹತೆಯನ್ನು ಎದುರಿಸುತ್ತಿದ್ದರೂ, ಟಿವಿಕೆ ಸೇರಲು ರಾಜೀನಾಮೆ ನೀಡಿದ ಪಕ್ಷದ ನಾಲ್ವರು ಶಾಸಕರ ರಾಜೀನಾಮೆ ಅಂಗೀಕರಿಸಿದ ತಮಿಳುನಾಡು ಸ್ಪೀಕರ್ ಜೆಸಿಡಿ ಪ್ರಭಾಕರ್ ನಿರ್ಧಾರವನ್ನು ಪ್ರಶ್ನಿಸಿ ಎಐಎಡಿಎಂಕೆ(AIADMK) ಸೋಮವಾರ(ಜೂ. 15) ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ ಎಂದು ವರದಿಯಾಗಿದೆ.
ಎಐಎಡಿಎಂಕೆ ಶಾಸಕರಾದ ಮರಗತಂ ಕುಮಾರವೇಲ್, ಎಸ್. ಜಯಕುಮಾರ್ ಮತ್ತು ಪಿ. ಸತ್ಯಭಾಮ ಅವರು ರಾಜೀನಾಮೆ ನೀಡಿ ತಕ್ಷಣವೇ ಟಿವಿಕೆ ಸೇರಿದ್ದರು. ಅವರ ಬಳಿಕ ಮಾರನೇ ದಿನ ಎಸಕ್ಕಿ ಸುಬಯಾ ಸಹ ಟಿವಿಕೆ ಸೇರಿದ್ದರು. ಹೀಗಾಗಿ ವಿಪಕ್ಷಗಳು ಟಿವಿಕೆ ಸರ್ಕಾರ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದವು.
ಮುಖ್ಯ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ನ್ಯಾ. ಜಿ. ಅರುಲ್ ಮುರುಗನ್ ಅವರನ್ನೊಳಗೊಂಡ ಪೀಠದ ಮುಂದೆ, ಎಐಎಡಿಎಂಕೆ ಪರವಾಗಿ ವಿಷಯ ಪ್ರಸ್ತಾಪಿಸಿದ ಹಿರಿಯ ವಕೀಲ ಎಸ್.ಆರ್. ರಾಜಗೋಪಾಲ್, ದೇಶೀಯ ಮಕ್ಕಳ್ ಶಕ್ತಿ ಕಚ್ಚಿಯ ಅಧ್ಯಕ್ಷ ವಕೀಲ ಎಂ.ಎಲ್. ರವಿ ಅವರು ಈಗಾಗಲೇ ಸಲ್ಲಿಸಿರುವ ಪಿಐಎಲ್ ಜೊತೆಗೆ ಅರ್ಜಿಗಳನ್ನು ವಿಚಾರಣೆ ನಡೆಸುವಂತೆ ಕೋರಿದರು. ಪೀಠವು, ಜೂನ್ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಇನ್ನೂ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್, 25 ಶಾಸಕರ ಅನರ್ಹತೆ ಕೋರಿ ದೂರುಗಳನ್ನು ಸ್ಪೀಕರ್‌ಗೆ ಕಳುಹಿಸಲಾಗಿದೆ. ಆದರೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು 21 ಶಾಸಕರಿಗೆ ಕ್ಷಮಾದಾನ ಮಾಡಿ ಸ್ಪೀಕರ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಸ್ವೀಕರಿಸಿ ಶಾಸಕರನ್ನು ಅನರ್ಹತೆ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದಾರೆ (ಏಜೆನ್ಸೀಸ್).