ಹಿಂದೂ ಸಂಪ್ರದಾಯದಂತೆ ಮೇಕೆಗೆ ಅಂತ್ಯಕ್ರಿಯೆ
- ಹಿಂದೂ ಸಂಪ್ರದಾಯದಂತೆ ಮೇಕೆಗೆ ಅಂತ್ಯಕ್ರಿಯೆ
- ಪ್ರಯಾಗ್‌ರಾಜ್‌ನ ಗಂಗೆಯಲ್ಲಿ ಮೇಕೆಯ ಅಸ್ಥಿ ವಿಸರ್ಜನೆ
- 13ನೇ ದಿನದ ಕಾರ್ಯದಲ್ಲಿ 500ಕ್ಕೂ ಹೆಚ್ಚು ಮಂದಿಗೆ ಊಟ
ಮಧ್ಯಪ್ರದೇಶ: ಸಾಕುಪ್ರಾಣಿಗಳು ಮೃತಪಟ್ಟಾಗ ಕುಟುಂಬಸ್ಥರು ದುಃಖಿಸುವುದು, ಅಳುವುದು ಸಹಜ. ಆದರೆ ಇಲ್ಲೊಂದು ಕುಟುಂಬ ಮನೆಯ ಸದಸ್ಯಳಂತೆ ಸಾಕಿದ್ದ ಮೇಕೆಯೊಂದಕ್ಕೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದು, ಅದರ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸಿ, 500ಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ ಘಟನೆ ಗಮನ ಸೆಳೆದಿದೆ.
ಮಧ್ಯಪ್ರದೇಶದ ಸಿರೋಂಜ್‌ನ ಕೃಷ್ಣ ಕಾಲೋನಿಯ ನವಲ್ ಸಿಂಗ್ ಮಾಳವೀಯಲ್ಲಿ ಈ ವಿಶೇಷ ಘಟನೆ ನಡೆದಿದದೆ. ಗ್ರಾಮದ ಕುಟುಂಬವೊಂದು ‘ಕಟೋರಿ’ ಎಂಬ ಮೇಕೆಯನ್ನು ಸುಮಾರು 20 ವರ್ಷಗಳಿಂದ ಸಾಕಿತ್ತು. ಆಗಸ್ಟ್ 3ರಂದು ಅದು ಮೃತಪಟ್ಟಿದ್ದು, ಮಾಲಿಕರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. ಕಟೋರಿ ಕೇವಲ ಸಾಕುಪ್ರಾಣಿಯಾಗಿರಲಿಲ್ಲ, ಮನೆಯ ಮಗಳಂತೆ ನೋಡಿಕೊಂಡಿದ್ದೆವು ಎಂದು ಕಂಬನಿ ಮಿಡಿದಿದ್ದಾರೆ.
ಮೇಕೆಗೆ ಮಲಗಲು ಎಸಿ ರೂಮ್
ಅಲ್ಲದೆ, ಕಟೋರಿಗೆ ಮಲಗಲು ಹಾಸಿಗೆ, ಬೇಸಿಗೆಯಲ್ಲಿ ಎಸಿ ರೂಮ್ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಪ್ರೀತಿಯ ಮೇಕೆ ಮೃತಪಟ್ಟ ಬಳಿಕ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಬಳಿಕ ಕುಟುಂಬಸ್ಥರು ಅಸ್ಥಿಯನ್ನು ಪ್ರಯಾಗ್‌ರಾಜ್‌ಗೆ ಕೊಂಡೊಯ್ದು, ವಿಧಿವಿಧಾನದಂತೆ ಪವಿತ್ರ ಗಂಗಾ ನದಿಯಲ್ಲಿ ವಿಸರ್ಜಿಸಿದ್ದಾರೆ.
ಕಟೋರಿಗೆ 13 ದಿನದ ಕಾರ್ಯ
ಇಷ್ಟಕ್ಕೆ ಸುಮ್ಮನಾಗದ ಕುಟುಂಬ, ಆಗಸ್ಟ್ 15ರಂದು ಕಟೋರಿಗಾಗಿ 13 ದಿನದ ಕಾರ್ಯವನ್ನು ಮಾಡಿದ್ದಾರೆ. ಸಂಬಂಧಿಕರು, ನೆರೆಹೊರೆಯವರು ಸೇರಿದಂತೆ ಸ್ಥಳೀಯರಿಗೆ ಆಹ್ವಾನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಂದಿ ಸೇರಿದ್ರು. ಊಟಕ್ಕೆ ದಾಲ್-ಬಾಟಿ ಸೇರಿದಂತೆ ವಿವಿಧ ಖಾದ್ಯಗಳು, ಸಿಹಿತಿಂಡಿಗಳನ್ನು ಬಡಿಸಲಾಯಿತು. ಇದೇ ವೇಳೆ ಕಟೋರಿಯ ಫೋಟೋಗೆ ಹೂವು ಮಾಲೆ ಹಾಕಿ ಗೌರವ ಸಲ್ಲಿಸಿದರು.
ಸದಾ ಕುಟುಂಬದೊಂದಿಗೆ ಇರುತ್ತಿದ್ದ ಕಟೋರಿ
ಕಟೋರಿ ಕುಟುಂಬವೆಂದರೆ ಅಚ್ಚುಮೆಚ್ಚು, ಹಾಗಾಗಿ ಆಕೆ ನಮ್ಮ ಜತೆಗೇ ಇರುತ್ತಿದ್ದಳು, ನಮ್ಮನ್ನು ಬಿಟ್ಟು ಒಬ್ಬಳೇ ಇರುತ್ತಿರಲಿಲ್ಲ. ಆಕೆ ತೀರಿಕೊಂಡಾಗ ಮನೆಯ ಸದಸ್ಯರೇ ನಮ್ಮನ್ನು ಅಗಲಿದಂತೆ ನೋವಾಯಿತು. ಅದಕ್ಕಾಗಿಯೇ ಅಂತ್ಯಕ್ರಿಯೆ ಹಾಗೂ ಗಂಗಾ ಪೂಜೆ ನೆರವೇರಿಸಿದೆವು ಎಂದು ನವಲ್ ಸಿಂಗ್ ಮಾಳವೀಯ ಹೇಳಿದ್ದಾರೆ. ಮೇಕೆಯ ಮೇಲಿನ ಈ ಅಪಾರ ಪ್ರೀತಿ ಇದೀಗ ನೆಟ್ಟಿಗರ ಗಮನ ಸೆಳೆದಿದೆ,(ಏಜೆನ್ಸೀಸ್).