ಅಭಿಷೇಕ್ ಶರ್ಮಾ ಸಾರ್ವಕಾಲಿಕ ದಾಖಲೆ ಧೂಳೀಪಟ! ಕೇವಲ 12 ಪಂದ್ಯಗಳಲ್ಲಿ 43 ಭೀಕರ ಸಿಕ್ಸರ್ ಚಚ್ಚಿ ಇತಿಹಾಸ ಬರೆದ ವೈಭವ್!  
ದೇಶ

ಅಭಿಷೇಕ್ ಶರ್ಮಾ ಸಾರ್ವಕಾಲಿಕ ದಾಖಲೆ ಧೂಳೀಪಟ! ಕೇವಲ 12 ಪಂದ್ಯಗಳಲ್ಲಿ 43 ಸಿಕ್ಸರ್ ಚಚ್ಚಿ ಇತಿಹಾಸ ಬರೆದ ವೈಭವ್! Vaibhav Sooryavanshi

ನವದೆಹಲಿ: ಐಪಿಎಲ್ 2026ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುತ್ತಿರುವ ಬಿಹಾರದ ಯುವ ಆಟಗಾರ ವೈಭವ್ ಸೂರ್ಯವಂಶಿ(Vaibhav Sooryavanshi) ಕ್ರಿಕೆಟ್ ಲೋಕವೇ ಬೆರಗಾಗುವಂತಹ ದಾಖಲೆ ಬರೆದಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 3 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ, ಭಾರತೀಯ ಬ್ಯಾಟರ್ ಒಬ್ಬರು ಒಂದೇ ಸೀಸನ್‌ನಲ್ಲಿ ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ಗಳ ಸಾರ್ವಕಾಲಿಕ ದಾಖಲೆಯನ್ನು ವೈಭವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಪಂದ್ಯದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಡೆಲ್ಲಿಯ ತ್ರಿಪುರಾನ ವಿಜಯ್ ಬೌಲಿಂಗ್‌ನಲ್ಲಿ ಭೀಕರ ಸಿಕ್ಸರ್ ಎತ್ತುವ ಮೂಲಕ ವೈಭವ್ ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದರು. ಈ ಮೂಲಕ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ಮುರಿದರು.

ಕೇವಲ 12 ಪಂದ್ಯಗಳಲ್ಲಿ 43 ಭೀಕರ ಸಿಕ್ಸರ್‌ಗಳು!

ಪ್ರಸಕ್ತ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಅತ್ಯಧಿಕ ರನ್ ಬೇಟೆಯಾಡಿರುವ ವೈಭವ್ ಸೂರ್ಯವಂಶಿ, ಈ ಆವೃತ್ತಿಯಲ್ಲಿ ಆಡಿರುವ ಕೇವಲ 12 ಪಂದ್ಯಗಳಲ್ಲಿ ಬರೋಬ್ಬರಿ 43 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ. ಈ ಹಿಂದೆ 2024ರ ಐಪಿಎಲ್ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ 16 ಪಂದ್ಯಗಳನ್ನು ಆಡಿದ್ದ ಅಭಿಷೇಕ್ ಶರ್ಮಾ 42 ಸಿಕ್ಸರ್ ಸಿಡಿಸಿದ್ದು ಇದುವರೆಗಿನ ಭಾರತೀಯ ಆಟಗಾರನ ಅತ್ಯುತ್ತಮ ದಾಖಲೆಯಾಗಿತ್ತು. ಆದರೆ, ವೈಭವ್ ಕೇವಲ 12 ಪಂದ್ಯಗಳಲ್ಲೇ ಆ ದಾಖಲೆಯನ್ನು ಅಳಿಸಿ ಹಾಕಿ ಹೊಸ ರಾಜಕುಮಾರನಾಗಿ ಹೊರಹೊಮ್ಮಿದ್ದಾರೆ.

ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಸಾಲಿಗೆ ಸೇರಿದ ಕಿರಿಯ ಸಿಕ್ಸರ್ ಕಿಂಗ್!

ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ವೈಭವ್ ಸೂರ್ಯವಂಶಿ (43 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದರೆ, ಅಭಿಷೇಕ್ ಶರ್ಮಾ (42 ಸಿಕ್ಸರ್ - 2024) ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ 2025ರ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ 17 ಪಂದ್ಯಗಳಲ್ಲಿ 39 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇವರ ನಂತರದ ಸ್ಥಾನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್‌ ಮಷಿನ್ ವಿರಾಟ್ ಕೊಹ್ಲಿ (2016 ಮತ್ತು 2024 ರಲ್ಲಿ ತಲಾ 38 ಸಿಕ್ಸರ್) ಹಾಗೂ ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್ ಯಾದವ್ (2025 ರಲ್ಲಿ 38 ಸಿಕ್ಸರ್) ಇದ್ದಾರೆ.

ಕ್ರಿಸ್ ಗೇಲ್ ಅವರ 59 ಸಿಕ್ಸರ್‌ಗಳ ದಾಖಲೆಯ ಮೇಲೆ ಕಣ್ಣು!

ಐಪಿಎಲ್ ಇತಿಹಾಸದ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಒಟ್ಟಾರೆ ಜಾಗತಿಕ ದಾಖಲೆ ವೆಸ್ಟ್ ಇಂಡೀಸ್‌ನ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಲ್ಲಿದೆ. ಗೇಲ್ ಅವರು 2012ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಆಡುತ್ತಾ 15 ಪಂದ್ಯಗಳಲ್ಲಿ ಬರೋಬ್ಬರಿ 59 ಸಿಕ್ಸರ್‌ಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಕೇವಲ ಇಬ್ಬರು ಬ್ಯಾಟರ್‌ಗಳು ಮಾತ್ರ (ಕ್ರಿಸ್ ಗೇಲ್ ಮತ್ತು ಜೋಸ್ ಬಟ್ಲರ್) ಒಂದೇ ಸೀಸನ್‌ನಲ್ಲಿ 50 ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಸದ್ಯ ಲೀಗ್ ಹಂತದಲ್ಲಿ ರಾಜಸ್ಥಾನ್ ತಂಡಕ್ಕೆ ಇನ್ನೂ ಪಂದ್ಯಗಳು ಬಾಕಿ ಇರುವುದರಿಂದ, ವೈಭವ್ ಸೂರ್ಯವಂಶಿ ಈ 50 ಸಿಕ್ಸರ್‌ಗಳ ಗಣ್ಯ ಕ್ಲಬ್ ಸೇರುತ್ತಾರಾ ಎಂಬುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ,(ಏಜೆನ್ಸೀಸ್​).