Abhishek Banerjee office | ಅಭಿಷೇಕ್ ಬ್ಯಾನರ್ಜಿ ಕಚೇರಿಗೆ ಬುಲ್ಡೋಜರ್ ಶಾಕ್!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಶನಿವಾರ ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು, ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಡೈಮಂಡ್ ಹಾರ್ಬರ್ ಕ್ಷೇತ್ರದ ಸಂಸದ ಅಭಿಷೇಕ್ ಬ್ಯಾನರ್ಜಿಯ ಸಂಸದರ ಕಚೇರಿಯನ್ನು (Abhishek Banerjee office) ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ಅಧಿಕಾರಿಗಳು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದಾರೆ.
ಅಮ್ತಾಲಾದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಕಚೇರಿ ಕಟ್ಟಡವನ್ನು ಯಾವುದೇ ಅಧಿಕೃತ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಆಡಳಿತ ಮಂಡಳಿಯು ಈ ಹಿಂದೆ ನೋಟಿಸ್ ಅಂಟಿಸಿತ್ತು. ಇದರ ಬೆನ್ನಲ್ಲೇ, ಶನಿವಾರ ಅಧಿಕಾರಿಗಳು ಬುಲ್ಡೋಜರ್‌ಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕಟ್ಟಡ ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದರು.
ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳದಲ್ಲಿ ಭಾರಿ ಪೊಲೀಸ್ ಭದ್ರತೆ ಹಾಗೂ ಆಡಳಿತಾಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಧ್ವಂಸ ಕಾರ್ಯ ಆರಂಭವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಟಿಎಂಸಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಭಾರಿ ಜನಸಮೂಹ ಅಲ್ಲಿ ಜಮಾಯಿಸಿತ್ತು.
ಶಾಂತಿನಿಕೇತನ ನಿವಾಸ ಸೇರಿದಂತೆ 17 ಆಸ್ತಿಗಳಿಗೆ ನೋಟಿಸ್
ಅಭಿಷೇಕ್ ಬ್ಯಾನರ್ಜಿ ಕುಟುಂಬ ಸದಸ್ಯರು ಮತ್ತು ಅವರ ಒಡೆತನದ ಲೀಪ್ಸ್ ಅಂಡ್ ಬೌಂಡ್ಸ್ ಕಂಪನಿಯ ಹೆಸರಿನಲ್ಲಿ ದಾಖಲಾಗಿರುವ 17 ಆಸ್ತಿಗಳಿಗೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಈ ನೋಟಿಸ್ ಪಡೆದ ಆಸ್ತಿಗಳಲ್ಲಿ ಹರೀಶ್ ಮುಖರ್ಜಿ ರಸ್ತೆಯಲ್ಲಿರುವ ಬ್ಯಾನರ್ಜಿ ಅವರ ಅಧಿಕೃತ ನಿವಾಸ ಶಾಂತಿನಿಕೇತನ ಕೂಡ ಸೇರಿದೆ ಎಂಬುದು ಗಮನಾರ್ಹ. ವಿಶೇಷವೆಂದರೆ, ಈ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಪ್ರಸ್ತುತ ಟಿಎಂಸಿ ಹಿಡಿತದಲ್ಲೇ ಇದೆ.
ಇತ್ತೀಚೆಗಷ್ಟೇ ಬಿಜೆಪಿ, ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ ಹಾಗೂ ಅವರ ಸಹವರ್ತಿಗಳ ಜಂಟಿ ಒಡೆತನದಲ್ಲಿದೆ ಎಂದು ಆರೋಪಿಸಿ 43 ಆಸ್ತಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿತ್ತು. ಕೋಲ್ಕತ್ತಾ ನಾಗರಿಕ ಸಂಸ್ಥೆಯ ಆಸ್ತಿ ದಾಖಲೆಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಬಿಜೆಪಿ ಪ್ರತಿಪಾದಿಸಿತ್ತು.
ಆದರೆ, ಬಿಜೆಪಿಯ ಈ ಆರೋಪವನ್ನು ಟಿಎಂಸಿ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ತಳ್ಳಿಹಾಕಿದ್ದು, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನ ಡೇಟಾಬೇಸ್‌ನಲ್ಲಿ ಅಭಿಷೇಕ್ ಬ್ಯಾನರ್ಜಿ ಎಂಬ ಹೆಸರಿನ ಹಲವು ವ್ಯಕ್ತಿಗಳಿದ್ದಾರೆ. ಹಾಗಾಗಿ ಆ ಪಟ್ಟಿಯಲ್ಲಿರುವ ಎಲ್ಲಾ ಆಸ್ತಿಗಳೂ ಟಿಎಂಸಿ ನಾಯಕನಿಗೇ ಸೇರಿವೆ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಟಿಎಂಸಿ ನಾಯಕರ ಆಸ್ತಿಗಳ ಮೇಲೆ ಮುಂದುವರಿದ ಕಠಿಣ ಕ್ರಮ
ಅಭಿಷೇಕ್ ಮಾತ್ರವಲ್ಲದೇ ಟಿಎಂಸಿಯ ಅನೇಕ ನಾಯಕರು ಇಂತಹದೇ ಆಸ್ತಿ ಮುಟ್ಟುಗೋಲು ಆರೋಪಗಳನ್ನು ಎದುರಿಸುತ್ತಿದ್ದು, ಅವರಿಗೂ ಬುಲ್ಡೋಜರ್ ಆತಂಕವಿದೆ. ಇದೇ ತಿಂಗಳ ಆರಂಭದಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯಲ್ಲೇ ಟಿಎಂಸಿ ನಾಯಕ ಶೌಕತ್ ಮೊಲ್ಲಾ ಮಗನಿಗೆ ಸೇರಿದ, ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಕೆಫೆಯನ್ನು ಸಹ ಧ್ವಂಸಗೊಳಿಸಲಾಗಿತ್ತು.
ಪ್ರಸ್ತುತ ನಡೆದಿರುವ ಈ ಬುಲ್ಡೋಜರ್ ಕಾರ್ಯಾಚರಣೆಯ ಕುರಿತು ಸಂಸದ ಅಭಿಷೇಕ್ ಬ್ಯಾನರ್ಜಿ ಕಚೇರಿಯಾಗಲಿ ಅಥವಾ ತೃಣಮೂಲ ಕಾಂಗ್ರೆಸ್ ಪಕ್ಷವಾಗಲಿ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ(ಏಜೆನ್ಸೀಸ್).